ನಿಖಿಲ್ ಮದುವೆ ವಿವರ ನೀಡದ ಸರ್ಕಾರ: ಹೈಕೋರ್ಟ್ ಅಸಮಾಧಾನ
ನಿಖಿಲ್ ಮದುವೆ ಕಾರ್ಯಕ್ರಮಕ್ಕೆ ಎಷ್ಟು ವಾಹನಗಳಿಗೆ ಪಾಸ್ ನೀಡಲಾಗಿತ್ತು ಎಂಬ ಬಗ್ಗೆ ಮಾಹಿತಿ ನೀಡುವಂತೆ ಮೇ 5ರಂದು ನಡೆದ ವಿಚಾರಣೆ ವೇಳೆ ಆದೇಶಿಸಲಾಗಿತ್ತು. ಆದರೆ ಸರ್ಕಾರ ಈವರೆಗೆ ಅದರ ಬಗ್ಗೆ ಮಾಹಿತಿ ಕೊಟ್ಟಿಲ್ಲ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಮದುವೆ ಕಾರ್ಯಕ್ರಮಕ್ಕೆ ನೀಡಲಾಗಿದ್ದ ವಾಹನಗಳ ಪಾಸ್ ವಿವರ ಸಲ್ಲಿಸದ ರಾಜ್ಯ ಸರ್ಕಾರದ ನಡೆಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಲಾಕ್ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿ ಮದುವೆಗೆ ಅನುಮತಿ ನೀಡಲಾಗಿದೆ ಎಂದು ಆರೋಪಿಸಿ ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಹಾಗೂ ನ್ಯಾ. ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ವಾದ ಮಂಡಿಸಿ, ಮದುವೆ ಕಾರ್ಯಕ್ರಮಕ್ಕೆ ಸುತ್ತಲಿನ ಐದಾರು ಜಿಲ್ಲೆಗಳಿಂದ ಜನ ಆಗಮಿಸಿರುವ ಸಾಧ್ಯತೆಯಿದೆ. ಆದ್ದರಿಂದ ಎಷ್ಟು ವಾಹನಗಳಿಗೆ ಪಾಸ್ ನೀಡಲಾಗಿತ್ತು ಎಂದು ಸರ್ಕಾರದಿಂದ ಮಾಹಿತಿ ಪಡೆಯಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.
ವಕೀಲರ ಮನವಿಗೆ ಪ್ರತಿಕ್ರಿಯಿಸಿದ ಪೀಠ, ಮದುವೆ ಕಾರ್ಯಕ್ರಮಕ್ಕೆ ಎಷ್ಟು ವಾಹನಗಳಿಗೆ ಪಾಸ್ ನೀಡಲಾಗಿತ್ತು ಎಂಬ ಮಾಹಿತಿ ನೀಡುವಂತೆ ಮೇ 5ರಂದು ನಡೆದ ವಿಚಾರಣೆ ವೇಳೆ ಆದೇಶಿಸಿತ್ತು. ಆದರೆ ಸರ್ಕಾರ ಈವರೆಗೆ ಅದರ ಬಗ್ಗೆ ಮಾಹಿತಿ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿತು. ಅಲ್ಲದೆ ಮದುವೆ ಕಾರ್ಯಕ್ರಮಕ್ಕೆ ವಾಹನಗಳಿಗೆ ಪಾಸ್ ನೀಡಲಾಗಿದ್ದರೆ ಆ ಕುರಿತು ಮುಂದಿನ ವಿಚಾರಣೆ ವೇಳೆ ತಪ್ಪದೇ ವಿವರ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಮೇ 18ಕ್ಕೆ ಮುಂದೂಡಿತು.