ಬೆಂಗಳೂರು: ನೆರೆ ಹಾವಳಿಯಿಂದ ಅಲ್ಪಸ್ವಲ್ಪ ಹಾನಿಗೊಳಗಾದ ಮನೆಗಳ ಸಂತ್ರಸ್ತರಿಗೆ ಆರ್ಟಿಜಿಎಸ್ ಮೂಲಕ ತ್ವರಿತವಾಗಿ ಪರಿಹಾರ ಹಣವನ್ನು ವಿತರಿಸಲು ಸರ್ಕಾರ ಅನುಮತಿ ನೀಡಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ವಸತಿ ಇಲಾಖೆ ನೆರೆ ಹಾವಳಿಯಿಂದ ಅಲ್ಪಸ್ವಲ್ಪ ಹಾನಿಗೊಳಗಾದ ಮನೆಗಳಿಗೆ ಸಂಬಂಧಿಸಿ ಆಯಾ ಜಿಲ್ಲೆಯ ತಾಲೂಕಿನ ತಹಶೀಲ್ದಾರರು ಸಂತ್ರಸ್ತರ ಮನೆಗಳ ಪಟ್ಟಿಯನ್ನು ಪರಿಶೀಲಿಸಿ, ಸಮರ್ಪಕವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದೆ.
ತ್ವರಿತವಾಗಿ ಹಣ ವಿತರಿಸಲು ಸರ್ಕಾರ ಸೂಚನೆ ಬಳಿಕ ಸರಿಯಿರುವ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿ, ಅವರ ರುಜು ಪಡೆದ ನಂತರ ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಿಂದ ತಹಶೀಲ್ದಾರರು ತಮ್ಮ ಖಾತೆಗೆ ಅನುದಾನ ವರ್ಗಾಯಿಸಬೇಕು. ತಹಶೀಲ್ದಾರರ ಖಾತೆಯಿಂದ ಪರಿಹಾರ ಹಣವನ್ನು ತ್ವರಿತವಾಗಿ ಆರ್ಟಿಜಿಎಸ್ ಮೂಲಕ ಸಂತ್ರಸ್ತರಿಗೆ ವಿತರಿಸಲು ಕ್ರಮ ಕೈಗೊಳ್ಳುವಂತೆ ನೆರೆ ಪೀಡಿತ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
ಜಿಲ್ಲಾಧಿಕಾರಿಗಳಿಂದ ಅನುಮೋದಿಸಲ್ಪಟ್ಟ ಹಾನಿಗೊಳಗಾದ ಮನೆಗಳಿಗೆ ಅನುದಾನವನ್ನು ರಾಜೀವ್ ಗಾಂಧಿ ವಸತಿ ನಿಗಮದಿಂದ ಬಿಡುಗಡೆಗೊಳಿಸಲು ಕ್ರಮ ವಹಿಸಲಾಗಿದೆ. ಆದರೆ, ಸಂತ್ರಸ್ತರಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳ ಮಾಹಿತಿಗಳಲ್ಲಿ ಕೆಲ ನ್ಯೂನತೆ ಕಂಡು ಬಂದಿದೆ. ಈ ಹಿನ್ನೆಲೆ ಖಾತೆಗಳ ಮಾಹಿತಿ ಮರು ಪರಿಶೀಲನೆಗೆ ಕೋರಲಾಗಿರುವುದರಿಂದ ಅನುದಾನ ಬಿಡುಗಡೆ ವಿಳಂಬವಾಗುತ್ತಿರುವುದಾಗಿ ರಾಜೀವ್ ಗಾಂಧಿ ವಸತಿ ನಿಗಮ ಸರ್ಕಾರಕ್ಕೆ ಪತ್ರ ಬರೆದಿತ್ತು. ಈ ಸಂಬಂಧ ವಸತಿ ಇಲಾಖೆ ಈಗ ಕೆಲ ಸೂಚನೆಗಳನ್ನು ನೀಡಿ ಆದೇಶ ಹೊರಡಿಸಿದೆ.
ಸಂತ್ರಸ್ತರ ಮನೆ ವಿವರ:
11,442 ಮನೆಗಳು ನೆರೆಗೆ ಸಂಪೂರ್ಣ ಹಾನಿಗೊಳಗಾದ ಬಗ್ಗೆ ರಾಜೀವ್ ಗಾಂಧಿ ವಸತಿ ನಿಗಮದ ಆನ್ಲೈನ್ನಲ್ಲಿ ವಿವರ ನಮೂದಾಗಿದೆ. ಈ ಪೈಕಿ 9,935 ಮನೆಗಳಿಗೆ ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿದ್ದಾರೆ.
30,700 ಮನೆಗಳು ಭಾಗಶಃ ಹಾನಿಗೊಳಗಾಗಿರುವ ಬಗ್ಗೆ ಆನ್ಲೈನ್ನಲ್ಲಿ ನಮೂದಿಸಲಾಗಿದೆ. ಈ ಪೈಕಿ 26,484 ಮನೆಗಳನ್ನು ಡಿಸಿಗಳು ಅನುಮೋದಿಸಿದ್ದಾರೆ.
74,488 ಮನೆಗಳು ಅಲ್ಪಸ್ವಲ್ಪ ಹಾನಿಯಾಗಿದೆ ಎಂದು ಆನ್‌ಲೈನ್ ಮೂಲಕ ನಮೂದಿಸಲಾಗಿದೆ. ಈ ಪೈಕಿ 66,520 ಮನೆಗಳಿಗೆ ಡಿಸಿಗಳು ಅನುಮೋದನೆ ನೀಡಿದ್ದಾರೆ.