ಬೆಂಗಳೂರು: ಎಲ್ಲಾ ಇಲಾಖೆಗಳಡಿ ಬರುವ ನಿಗಮ/ಮಂಡಳಿ/ಪ್ರಾಧಿಕಾರಗಳ ಮುಂದುವರಿದ ಕಾಮಗಾರಿಗಳಿಗೆ ತಡೆಹಿಡಿಯಲಾಗಿದ್ದ ಅನುದಾನ ಬಿಡುಗಡೆಗೊಳಿಸಿ ಸರ್ಕಾರ ಆದೇಶಿಸಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲಿನ ಎಲ್ಲಾ ಇಲಾಖೆಗಳಡಿ ಬರುವ ನಿಗಮ/ಮಂಡಳಿ/ಪ್ರಾಧಿಕಾರಗಳ ಮುಂದುವರಿದ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯನ್ನು ತಡೆಹಿಡಿಯಲಾಗಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಅನುದಾನ ತಡೆಹಿಡಿದ ಆದೇಶವನ್ನು ಹಿಂಪಡೆದಿದ್ದಾರೆ. ಈ ಸಂಬಂಧ ಆರ್ಥಿಕ ಇಲಾಖೆ ಅನುದಾನ ಬಿಡುಗಡೆ ಆದೇಶ ಹೊರಡಿಸಿದೆ.
ಎಲ್ಲಾ ಇಲಾಖೆಗಳು ಹಾಗೂ ಇಲಾಖೆಗಳ ಅಧೀನಕ್ಕೊಳಪಡುವ ನಿಗಮ/ಮಂಡಳಿ/ಪ್ರಾಧಿಕಾರಗಳ ಮುಂದುವರಿದ ಕಾಮಗಾರಿಗಳ ಸಮರ್ಪಕ ಅನುಷ್ಠಾನದ ಬಗ್ಗೆ ಪರಿಶೀಲಿಸಿ, ನಿಯಮಾನುಸಾರವಿರುವುದನ್ನು ಖಚಿತಪಡಿಸಿಕೊಂಡು ಹಿಂದಿನಂತೆಯೇ ಹಣ ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದೆ. ಹಿಂದಿನ ಸರ್ಕಾರದಿಂದ ಅನುಮೋದನೆಗೊಂಡು ಇನ್ನೂ ಪ್ರಾರಂಭವಾಗದಿರುವ (unstarted) ಕಾಮಗಾರಿಗಳ ಬಗ್ಗೆ ಸಂಬಂಧಪಟ್ಟ ಸಚಿವರ ಅನುಮೋದನೆಯೊಂದಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಆಡಳಿತ ಇಲಾಖೆಯ ಕಾರ್ಯದರ್ಶಿಗಳು ಕ್ರಮ ವಹಿಸಲು ತಿಳಿಸಲಾಗಿದೆ.
2023-24ರ ಆಯವ್ಯಯದಲ್ಲಿ (ಜುಲೈ) ಅವಕಾಶ ಮಾಡಿಕೊಂಡಿರುವ ಹೊಸ ಯೋಜನೆ/ಕಾಮಗಾರಿಗಳ ಬಗ್ಗೆ ಆರ್ಥಿಕ ಇಲಾಖೆಯಿಂದ ನೀಡಲಾದ ಆಯವ್ಯಯ ಸಲಹಾ ಟಿಪ್ಪಣಿ (Budget Advise) ಹಾಗೂ ಅಧಿಕಾರ ಪ್ರತ್ಯಾಯೋಜನೆ ಆದೇಶದಲ್ಲಿನ ಕ್ರಮಗಳನ್ನು ಅನುಸರಿಸಿ ಆಡಳಿತ ಇಲಾಖೆ ಹೊಸ ಯೋಜನೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸುವಂತೆ ತಿಳಿಸಿದೆ.