ಬೆಂಗಳೂರು :ಮಾದಕ ವಸ್ತುಗಳ ಸಾಗಾಟ, ಮಾರಾಟ ನಿಯಂತ್ರಿಸುವಲ್ಲಿ ಬೆಂಗಳೂರು ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಾದಕ ವಿರೋಧಿ ದಿನಾಚರಣೆ ಪ್ರಯುಕ್ತ ಮಾತನಾಡಿದ ಅವರು, ಪೊಲೀಸರು ವಶಪಡಿಸಿಕೊಂಡಿದ್ದ ಶೇ.60ರಷ್ಟು ಮಾದಕ ವಸ್ತುವನ್ನು ನಾಶಪಡಿಸಿದ್ದೇವೆ. ಇನ್ನು, 40ರಷ್ಟು ಎಫ್ಎಸ್ಎಸ್ ಪರೀಕ್ಷಾ ಹಂತದಲ್ಲಿದೆ. ಕೋವಿಡ್ ಬಿಕ್ಕಟ್ಟಿನಲ್ಲಿಯೂ ನಮ್ಮ ಸಮರ ನಿಂತಿಲ್ಲ ಎಂದರು.
ಅಂತಾರಾಷ್ಟ್ರೀಯ ಮಾದಕ ವಿರೋಧಿ ದಿನಾಚರಣೆ ಹಿನ್ನೆಲೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಈ ವರ್ಷ ಜಪ್ತಿಯಾದ ಮಾದಕ ವಸ್ತುಗಳ ವಿಲೇವಾರಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಡಿಜಿ, ಐಜಿಪಿ ಪ್ರವೀಣ್ ಸೂದ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸರಬರಾಜು ಆಗುತ್ತಿದ್ದ ಮಾದಕ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಬೆಂಗಳೂರಿನ 8 ವಿಭಾಗ ಮತ್ತು ಸಿಸಿಬಿ ಪೊಲೀಸರಿಂದ ಲಾಕ್ಡೌನ್ ಸಂದರ್ಭದಲ್ಲಿ 3 ಸಾವಿರ ಕೆಜಿ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಈ ಸಂಬಂಧ ಒಟ್ಟು 382 ಪ್ರಕರಣ ದಾಖಲಾಗಿವೆ. 2,500 ಕೆಜಿ ಗಾಂಜಾ, 960 ಗ್ರಾಂ ಅಫೀಮು, 872 ಗ್ರಾಂ ಹೆರಾಯಿನ್, 82 ಗ್ರಾಂ ಎಂಡಿಎಂಎ ಮಾತ್ರೆ, 9.4 ಕೆಜಿ ಚರಸ್, 90 ಕೆಜಿ ಮೆಥಾಕ್ಲೀನ್, 10.2 ಕೆಜಿ ಹ್ಯಾಶಿಶ್ ಆಯಿಲ್, 96.43 ಗ್ರಾಂ ಕೊಕೇನ್ ಸೇರಿ 50 ಕೋಟಿ ರೂ.ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.