ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಬೆಂಗಳೂರು: ಮುಗಿದು ಹೋದ ಪ್ರಕರಣವನ್ನು ಮತ್ತೆ ಕೆದಕಿ ನನ್ನ ಮೇಲೆ ಎಫ್ಐಆರ್ ದಾಖಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ದ್ವೇಷದ ರಾಜಕಾರಣ ಮಾಡುತ್ತಿದ್ದು, ಇದನ್ನು ರಾಜಕೀಯವಾಗಿ ಮತ್ತು ಕಾನೂನಾತ್ಮಕ ಎದುರಿಸುತ್ತೇನೆ. ಆ ಶಕ್ತಿಯನ್ನು ಭಗವಂತ ನಮಗೂ ಕೊಟ್ಟಿದ್ದಾನೆ. ಇದಕ್ಕೆಲ್ಲಾ ನಾನು ಹೆದರುವ, ಭಯ ಪಡುವ ಮಾತೇ ಇಲ್ಲ ಎಂದು ಮಾಜಿ ಡಿಸಿಎಂ ಡಾ ಅಶ್ವತ್ಥನಾರಾಯಣ್ ತಿರುಗೇಟು ನೀಡಿದ್ದಾರೆ.
ಖಾಸಗಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ತಿಂಗಳ ಹಿಂದೆಯೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದೇನೆ. ಟಿಪ್ಪು ಸುಲ್ತಾನ್ ಮೇಲಿನ ಸಿದ್ದರಾಮಯ್ಯ ಪ್ರೇಮದ ಬಗ್ಗೆ ಹೇಳಿ, ಕಾಂಗ್ರೆಸ್ ಸೋಲಿಸಬೇಕು ಎಂಬ ಅರ್ಥದಲ್ಲಿ ಹೇಳಿದ್ದೇನೆ. ಆದರೆ ಯಾರನ್ನೂ ಹಾನಿ ಮಾಡಲು, ತೊಂದರೆ ಕೊಡಲು ಹೇಳಿಕೆ ಕೊಟ್ಟಿಲ್ಲ. ನಾನು ಯಾವತ್ತಿಗೂ ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ಅವರ ಮನಸ್ಸಿಗೆ ನೋವು ಆಗಿದ್ದರೆ, ಈಗಾಗಲೇ ಅವರಿಗೆ ವಿಷಾದ ಕೂಡ ವ್ಯಕ್ತಪಡಿಸೋದಾಗಿ ಹೇಳಿದ್ದೇನೆ. ಆದರೆ ಮುಗಿದು ಹೋಗಿರುವ ವಿಷಯವನ್ನು ಮತ್ತೊಮ್ಮೆ ಸಿಎಂ, ಡಿಸಿಎಂ ಪೊಲೀಸರ ಸಭೆಯಲ್ಲಿ ಪ್ರಸ್ತಾಪಿಸಿ, ಯಾಕೆ ಅವರ ಮೇಲೆ ಇನ್ನೂ ಕೇಸ್ ಹಾಕಿಲ್ಲ ಎಂದು ನನ್ನ ಮೇಲೆ ಇವಾಗ ಕೇಸ್ ಹಾಕಿಸಿದ್ದಾರೆ. ಇದರಿಂದಲೇ ಗೊತ್ತಾಗುತ್ತಿದೆ ಅವರು ಸ್ಪಷ್ಟವಾಗಿ ದ್ವೇಷದ ರಾಜಕಾರಣ, ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರೋದು ಎಂದು ಹೇಳಿದರು.
ನಾನು ಇದನ್ನು ರಾಜಕೀಯವಾಗಿ ಮತ್ತು ಕಾನೂನಾತ್ಮಕ ಎದುರಿಸುವ ಕೆಲಸ ಮಾಡುತ್ತೇನೆ. ನಾವು ಯಾವತ್ತಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ಇವರು ಪೇ ಸಿಎಂ, 40 ಪರ್ಸೆಂಟ್ ಕಮಿಷನ್ ಅಂತೆಲ್ಲ ಮಾಡಿದ್ದರು. ಇವರು ಇಷ್ಟೆಲ್ಲಾ ಮಾಡಿದ್ದರೂ ನಾವು ಸಾಫ್ಟ್ ಆಗಿ ಇದ್ದೇವೆ ಹೊರತು, ಯಾವತ್ತಿಗೂ ಕೇಸ್ ಹಾಕುವ ಕೆಲಸ ಮಾಡಿಲ್ಲ. ಇವಾಗ ನನ್ನ ಮೇಲೆ ಅಟೆಂಪ್ಟ್ ಟು ಮರ್ಡರ್ ಕೇಸ್ (ಕೊಲೆ ಯತ್ನ ಪ್ರಕರಣ) ಹಾಕಿದ್ದಾರೆ. ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲೇ ಈ ರೀತಿ ನಡೆಯುತ್ತಿದೆ ಅಂದರೆ ಏನು ಅರ್ಥ..? ರಾಜಕೀಯವಾಗಿ ಎದುರಿಸುವ ಶಕ್ತಿಯನ್ನು ಭಗವಂತ ನಮಗೂ ಕೊಟ್ಟಿದ್ದಾನೆ. ನಿಮಗೆ ಅಧಿಕಾರ ತಲೆಗೆ ಏರಿದೆ. ಇದಕ್ಕೆಲ್ಲಾ ನಾನು ಹೆದರುವ ಅಥವಾ ಭಯ ಪಡುವ ಮಾತೇ ಇಲ್ಲ ಎಂದು ಹೇಳಿದರು.
ಗಾಜಿನ ಮನೆಯಲ್ಲಿ ಇರೋರಿಗೆ ಇಷ್ಟು ಆದರೆ, ನಾವು ನ್ಯಾಯಯುತವಾಗಿ ಇರೋರಿಗೆ ಇನ್ನೂ ಎಷ್ಟು ಇರಬಾರದು. ಇಂತಹದ್ದೆಲ್ಲ ನೋಡೋಕೆ ನಾವು ರೆಡಿ ಇದ್ದೇವೆ. ಅವರು ಬರಲಿ, ಕಾನೂನಿನಲ್ಲಿ ನಾತ ಹೊಡೆಯೋರೆ ಇಷ್ಟು ಮಾತಾಡಬೇಕಾದರೆ, ನಾವು ನ್ಯಾಯ ಪಾಲನೆ ಮಾಡೋರು, ನಮಗೆ ಇನ್ನೂ ಎಷ್ಟು ಧೈರ್ಯ ಇರಬಾರದು..? ಪೊಲೀಸರು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಪೋಸ್ಟಿಂಗೋ ಅಥವಾ ಇವರ ಮಾತು ಕೇಳಿ ಅಧಿಕಾರ ದುರ್ಬಳಕೆ ಮಾಡಿಕೊಂಡರೆ ಪೊಲೀಸರೂ ಕಾನೂನಾತ್ಮಕ ಕ್ರಮ ಎದುರಿಸಬೇಕಾಗಲಿದೆ ಎಂದು ಪೊಲೀಸರಿಗೂ ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ರಾಜಕೀಯ ನೆಲೆಯಲ್ಲಿ ಹೇಳಿದ ಮಾತುಗಳು, ಸಿದ್ದರಾಮಯ್ಯರ ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ: ಸಚಿವ ಅಶ್ವತ್ಥನಾರಾಯಣ್