ಬೆಂಗಳೂರು :ಭಾರತದಲ್ಲಿ ಪ್ರತಿ 5 ನಿಮಿಷಕ್ಕೊಮ್ಮೆ ಯಾರಾದರೊಬ್ಬರಿಗೆ ರಕ್ತದ ಕ್ಯಾನ್ಸರ್ ಅಥವಾ ಇತರೆ ರಕ್ತದ ತೊಂದರೆ ಇರುವುದು ಪತ್ತೆಯಾಗಿದೆ. 42 ದಶಲಕ್ಷ ಥಲಸ್ಸೀಮಿಯಾ ತೊಂದರೆಯಿಂದ ಬಳಲುವವರು ಇರುವ ನಮ್ಮ ದೇಶ ಜಗತ್ತಿನಲ್ಲಿ ಥಲಸ್ಸೀಮಿಯಾದ ರಾಜಧಾನಿ ಎಂದು ಹೆಸರಾಗಿದೆ.
ಈ ತೊಂದರೆ ವಿಸ್ತಾರವಾಗಿ ಹರಡಿರುವ ಅನುವಂಶೀಯ ಸ್ಥಿತಿಯಾಗಿದೆ. ಪ್ರತಿ ವರ್ಷ ತೀವ್ರ ರಕ್ತಹೀನತೆಯ ಅನಿಮಿಯಾ ತೊಂದರೆಯ ಜೊತೆಗೆ 10,000ಕ್ಕೂ ಹೆಚ್ಚಿನ ಸಂಖ್ಯೆಯ ಮಕ್ಕಳು ಜನಿಸುತ್ತಾರೆ.
ಈ ರೋಗದಿಂದ ಬಳಲುವ ರೋಗಿಗಳಿಗೆ ನಿಗದಿತ ಅವಧಿಗೊಮ್ಮೆ ರಕ್ತ ವರ್ಗಾವಣೆಯ ಅಗತ್ಯವಿದೆ. ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ಎಂದರೆ ಎಳೆಯ ವಯಸ್ಸಿನಲ್ಲಿಯೇ ಬ್ಲಡ್ ಸ್ಟಿಮ್ ಸೆಲ್ ಟ್ರಾನ್ಸ್ ಪ್ಲಾಂಟ್ ಮಾಡಿಸುವುದು. ಆದರೆ, ಈ ಪುಟ್ಟ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಸರಿಯಾದ ಆರೈಕೆ ಪೂರೈಸಲು ಆಸ್ಪತ್ರೆಗಳಲ್ಲಿ ಸಾಕಷ್ಟು ಸಾಮರ್ಥ್ಯ ಇರುವುದಿಲ್ಲ.
ಇಂತಹ ಉನ್ನತ ಮಟ್ಟದ ಸಾಮರ್ಥ್ಯ ಕಲ್ಪಿಸುವ ಸಲುವಾಗಿ, ಬೆಂಗಳೂರಿನಲ್ಲಿ ಬೋನ್ ಮ್ಯಾರೊ ಟ್ರಾನ್ಸ್ ಪ್ಲಾಂಟ್ ಘಟಕ ನಿರ್ಮಾಣಕ್ಕೆ ಜರ್ಮನ್ ದೇಶದ ಸಂಸ್ಥೆಯೊಂದು ನಿಧಿ ನೆರವು ನೀಡಿದೆ.
ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಘಟಕಕ್ಕೆ ಜರ್ಮನ್ನಿಂದ ನಿಧಿ ನೆರವು ರಕ್ತದ ಕ್ಯಾನ್ಸರ್ ವಿರುದ್ಧ ಹೋರಾಡಲು ಸಮರ್ಪಿತವಾದ ಅಂತಾರಾಷ್ಟ್ರೀಯ ಲಾಭರಹಿತ ಸಂಸ್ಥೆಯಾದ ಡಿಕೆಎಂಎಸ್ ಮೆಕ್‍ಟಿಲ್ಡ್ ಹಾರ್ಫ್ ನೆನಪಿನಲ್ಲಿ ಅಸ್ಥಿಮಜ್ಜೆ ಕಸಿ (ಬಿಎಂಟಿ) ಘಟಕವನ್ನು ಇಂದು ಉದ್ಘಾಟಿಸಿದರು.
ಲಾಭರಹಿತ ಸಂಘಟನೆಯಾದ ಸಂಕಲ್ಪ್ ಇಂಡಿಯಾ ಫೌಂಡೇಷನ್ ನೂತನ ಘಟಕದ ಕಾರ್ಯಾಚರಣೆಯನ್ನು ಕ್ಯೂರ್2ಚಿಲ್ಡ್ರನ್‍ನ ವೈದ್ಯಕೀಯ ಸಲಹಾ ಬೆಂಬಲದ ಜೊತೆಗೆ ನಡೆಸಲಿದೆ. ಈ ಘಟಕ ಲಾಭರಹಿತ ಸಂಸ್ಥೆಯಾದ ಬೆಂಗಳೂರಿನ ಭಗವಾನ್ ಮಹಾವೀರ್ ಜೈನ್ ಹಾಸ್ಪಿಟಲ್ (ಬಿಎಂಜೆಎಚ್)ನ ಆವರಣದಲ್ಲಿದೆ.
ಈ ಅತ್ಯಾಧುನಿಕ ಸೌಲಭ್ಯ ರಕ್ತದ ಕ್ಯಾನ್ಸರ್ ಅಥವಾ ಥಲಸ್ಸೀಮಿಯಾ ಅಥವಾ ಎಪ್ಲಾಸ್ಟಿಕ್ ಅನಿಮಿಯಾದಂತಹ ರಕ್ತದ ತೊಂದರೆಗಳಿಂದ ಬಳಲುತ್ತಿರುವ ಸುಮಾರು 120 ಮಕ್ಕಳಿಗೆ ಚಿಕಿತ್ಸೆ ನೀಡಲಿದೆ. ಅಗತ್ಯವಿರುವ ರೋಗಿಗಳಿಗೆ ಕಸಿ ಕ್ರಮಕ್ಕೆ ಸಂಪರ್ಕವನ್ನು ಸುಧಾರಿಸುವ ತನ್ನ ಗುರಿಯ ಭಾಗವಾಗಿ ಡಿಕೆಎಂಎಸ್ ನೂತನ ಬಿಎಂಟಿ ಸೆಂಟರ್‍ಗೆ 5.46 ಕೋಟಿ ರೂ.ಗಳ ನಿಧಿ ನೆರವು ನೀಡಿದೆ.
ನಿಧಿ ನೆರವು ಪಡೆದ ರೋಗಿಗಳಲ್ಲಿ ಏಳು ವರ್ಷ ವಯಸ್ಸಿನ ಶ್ರೀನಿಧಿ ಕೂಡ ಒಬ್ಬನಾಗಿದ್ದಾನೆ. ತಮ್ಮ ಅನುಭವವನ್ನು ಹಂಚಿಕೊಂಡ ಶ್ರೀನಿಧಿಯ ತಾಯಿ ಪದ್ಮಾವತಿ, ನನ್ನ ಮಗ ಥಲಸ್ಸೀಮಿಯಾ ವಿರುದ್ಧ ಹೋರಾಡುವುದನ್ನು ನೋಡಿದ ನಂತರ, ನಾನು ಏನೂ ಮಾಡಲು ಸಾಧ್ಯವಾಗದೇ ನಿಸ್ಸಹಾಯಕಳೆಂಬ ಭಾವನೆ ಮೂಡಿತ್ತು.
ಆದರೆ, ಡಿಕೆಎಂಎಸ್ ಮತ್ತು ಸಂಕಲ್ಪ್ ಇಂಡಿಯಾ ಫೌಂಡೇಷನ್‍ಗಳ ನೆರವಿನೊಂದಿಗೆ ನನ್ನ ರಕ್ತದ ಕಾಂಡಕೋಶಗಳನ್ನು ದಾನವಾಗಿ ನೀಡಿ ನನ್ನ ಮಗನ ಜೀವ ಉಳಿಸಲು ನನಗೆ ಸಾಧ್ಯವಾಗಿತ್ತು. ಹಲವು ವರ್ಷಗಳಿಂದ ನಾವು ಭಯ ಮತ್ತು ಅನಿಶ್ಚಿತತೆಯಲ್ಲಿ ಬದುಕಿದ್ದೇವೆ. ಆದರೆ ಈಗ ನಾವು ಸಾಮಾನ್ಯ ಮತ್ತು ಸಂತಸಪೂರ್ಣ ಕುಟುಂಬದಂತೆ ಬದುಕಬಹುದಾಗಿದೆ ಎಂದರು.
ಈ ಘಟಕದ ಕುರಿತು ಮಾತನಾಡಿರುವ ಸಂಕಲ್ಪ್ ಇಂಡಿಯಾ ಫೌಂಡೇಷನ್‍ನ ಅಧ್ಯಕ್ಷ ಲಲಿತ್ ಪಲ್ಮಾರ್, ಸುಮಾರು 120 ಮಕ್ಕಳಿಗೆ ವಾರ್ಷಿಕವಾಗಿ ಈ ಕೇಂದ್ರದಲ್ಲಿ ಚಿಕಿತ್ಸೆ ನೀಡಲು ನಮಗೆ ಸಾಧ್ಯವಾಗಲಿದೆ. ಅತ್ಯಾಧುನಿಕ ಮೂಲಸೌಕರ್ಯ ಜೊತೆಗೆ ಬದ್ಧತೆಯ ಉನ್ನತ ತರಬೇತಿ ಹೊಂದಿರುವ ವಿಶೇಷ ತಜ್ಞರ ತಂಡ ಹಾಗೂ ಅಂತಾರಾಷ್ಟ್ರೀಯ ಸಂದರ್ಶಕ ಸಲಹಾ ತಜ್ಞರ ಮಿಶ್ರಣವನ್ನು ಕೇಂದ್ರ ಹೊಂದಿದೆ.
ನಮ್ಮ ರೋಗಿಗಳಿಗೆ ಈ ಮೂಲಕ ಅತ್ಯುತ್ತಮವಾದ ವೈದ್ಯಕೀಯ ಫಲಿತಾಂಶಗಳನ್ನು ವಿತರಿಸಲು ಸಾಧ್ಯವಾಗುವ ಖಾತ್ರಿಯನ್ನು ಮಾಡಿಕೊಳ್ಳುತ್ತೇವೆ. ಅಹ್ಮದಾಬಾದ್‍ನಲ್ಲಿನ ಬಿಎಂಟಿ ಕೇಂದ್ರದ ಜೊತೆಗೆ ಈ ಕೇಂದ್ರ ಸೇರಿಸಿದಲ್ಲಿ ಕಸಿ ಕ್ರಮಕ್ಕಾಗಿ ಒಟ್ಟು 14 ಹಾಸಿಗೆಗಳಿರುತ್ತವೆ. ಇದರೊಂದಿಗೆ 'ಥಲಸ್ಸೀಮಿಯಾ ಮುಕ್ತ ಭಾರತ'ದ ನಮ್ಮ ಗುರಿಯ ಜೊತೆಗೆ ಮುಂದುವರಿಯಲು ಇದು ಅವಕಾಶ ಮಾಡಿಕೊಡುತ್ತದೆ ಎಂದರು.