ಬೆಂಗಳೂರು:ರಕ್ಷಣಾ ಪಡೆಗಳಲ್ಲಿ ಬದಲಾವಣೆಗಳು ಅನಿವಾರ್ಯತೆಯಾಗಿದೆ ಎಂದು ಸೇನಾ ಸಿಬ್ಬಂದಿಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆ. ನಗರದಲ್ಲಿನ ಏರ್ ಫೋರ್ಸ್ ಅಸೋಸಿಯೇಷನ್ ಆಯೋಜಿಸಿದ್ದ 14ನೇ ಏರ್ ಚೀಫ್ ಮಾರ್ಷಲ್ ಎಲ್ ಎಂ ಕತ್ರೆ ಸ್ಮಾರಕ ಉಪನ್ಯಾಸದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅನಿಲ್ ಚೌಹಾಣ್, ಜಾಗತಿಕ ಬದಲಾವಣೆಗಳಿಂದ ಸಶಸ್ತ್ರ ಪಡೆಗಳಲ್ಲಿ ಸಹ ವಿಕಾಸ ಮತ್ತು ಹೊಂದಾಣಿಕೆ ಬಹಳ ಮುಖ್ಯ. ರಕ್ಷಣಾ ಪಡೆಗಳಲ್ಲಿ ಸುಧಾರಣೆಗಳನ್ನು ನಿರ್ದಿಷ್ಟ ದಿಕ್ಕಿನಲ್ಲಿ ಮತ್ತು ವೇಗದಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ವಿಶ್ವದಲ್ಲಿ ಅವಕಾಶಗಳು ಸಹ ಅನಿಶ್ಚಿತವಾದ ವಾತಾವರಣ ಸೃಷ್ಟಿಸಿ ಬದಲಾವಣೆಯ ಅಗತ್ಯತೆಯನ್ನು ಸೂಚಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.
ಹೊಸ ತಂತ್ರಜ್ಞಾನಗಳ ಪರಿಚಯದಿಂದಾಗಿ ಯುದ್ಧದ ಗುಣಲಕ್ಷಣಗಳು ಬದಲಾಗುತ್ತಿವೆ. ಆದ್ದರಿಂದ ಸದ್ಯ ರಕ್ಷಣಾ ಪಡೆಗಳು ಮತ್ತು ಸಂಶೋಧನಾ ಸಂಸ್ಥೆಗಳು ತೆಗೆದುಕೊಳ್ಳುವ ಕ್ರಮಗಳು ಮುಂದಿನ 25 ವರ್ಷಗಳಲ್ಲಿ ಭಾರತದ ಸ್ಥಾನಮಾನವನ್ನು ನಿರ್ಧರಿಸಲಿದೆ. ಸದ್ಯ ಭಾರತ ದಕ್ಷಿಣ ದೇಶಗಳ ಜಾಗತಿಕ ನಾಯಕನಾಗಿ ಹೊರಹೊಮ್ಮಿದ್ದು, ಜಿ-20 ಯಶಸ್ವಿಯಾಗಿ ನಡೆದಿರುವುದು ಅದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಪ್ರಸ್ತುತ ಜಾಗತಿಕ ಭೌಗೋಳಿಕ ರಾಜಕೀಯ ಪರಿಸರವು ತುಂಬಾ ವೇಗವಾಗಿ ಬದಲಾಗುತ್ತಿದೆ. ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ಮತ್ತು ರಷ್ಯಾ ಉಕ್ರೇನ್ ಮಧ್ಯ ಇನ್ನೂ ಮುಗಿಯದ ಶಸ್ತ್ರಾಸ್ತ್ರ ಹೋರಾಟ ಈಗಿನ ವೇಗದ ಮತ್ತು ಅನಿಶ್ಚಿತ ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ. ರಷ್ಯಾ ಜಾಗತಿಕವಾಗಿ ಪ್ರಮುಖ ಪರಮಾಣು ಶಕ್ತಿಯಾಗಿದ್ದರೂ, ಮುಂದಿನ ದಿನಗಳಲ್ಲಿ ಅದರ ಭೌಗೋಳಿಕ ರಾಜಕೀಯ ಪ್ರಾಮುಖ್ಯತೆ ಕಡಿಮೆಯಾಗುತ್ತದೆ. ವ್ಯಾಗ್ನರ್ ದಂಗೆಯು ಅದರ ಆಂತರಿಕ ದೌರ್ಬಲ್ಯವನ್ನು ಸೂಚಿಸಿದೆ ಎಂದು ವ್ಯಾಖ್ಯಾನಿಸಿದರು.