ಬೆಂಗಳೂರು:ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್ ಅವರು ತಮ್ಮ ಪ್ರಗತಿ ಗ್ರೂಪ್ ಅಡಿಯಲ್ಲಿ ಬೃಹತ್ ಪ್ರಮಾಣದ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಗೌರವ್ ವಲ್ಲಭ್ ಆರೋಪಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿಂದು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಜತೆ ಜಂಟಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು.
ಅಶ್ವಥ್ ನಾರಾಯಣ ತಮ್ಮ ಇಲಾಖೆಯಡಿ ಪ್ರಗತಿ ಗ್ರೂಪ್‌ಗೆ 40 ಎಕರೆ ಭೂಮಿಯನ್ನು 199 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. 120 ಕೋಟಿ ರೂ. ಮಾತ್ರ ಟಿಡಿಎಸ್ ತೋರಿಸಿದ್ದಾರೆ. ಆದರೆ ಸೇಲ್ ಡೀಡ್ 199 ಕೋಟಿ ರೂ ಎಂದು ನಮೂದಿಸಿದ್ದಾರೆ. ಹಾಗಾದರೆ, ಉಳಿದ ಹಣ ಎಲ್ಲಿ ಹೋಯ್ತು? ಉಳಿದ ಹಣಕ್ಕೆ ಟಿಡಿಎಸ್ ಮೋಸ ಮಾಡಿದ್ದಾರೆ. ಆದಾಯ ತೆರಿಗೆಯಲ್ಲಿಯೂ ಕೂಡ ತೋರಿಸಿಲ್ಲ. ಮೂರು ಸೇಲ್ಸ್ ಡೀಡ್ ಮಾಡಿದ್ದಾರೆ ಎಂದು ಅವರು ದೂರಿದರು.
ಇವರು ಚೆಕ್ನಲ್ಲಿ ಹಣ ಕೊಟ್ಟಿದ್ದಾರೆ. ಆದರೂ ಟಿಡಿಎಸ್ ಹಣ ಕಡಿಮೆ ಮಾಡಿದ್ದಾರೆ. ಉಳಿದ 79 ಕೋಟಿ ರೂ ಎಲ್ಲಿ ಹೋಯ್ತು ಎಂದು ಗೌರವ್ ವಲ್ಲಭ್ ಪ್ರಶ್ನಿಸಿದರು. ಅದು ಬ್ಲಾಕ್ ಮನೀನಾ ಅಥವಾ ಮನಿ ಲಾಂಡರಿಂಗ್ ಮಾಡಲಾಗಿದೆಯೇ ಎಂಬುದಕ್ಕೆ ಅಶ್ವಥ್ ನಾರಾಯಣ ಉತ್ತರಿಸಬೇಕು. ಐಟಿ, ಇಡಿ ಅಧಿಕಾರಿಗಳು ಯಾಕೆ ಸುಮ್ಮನಿದ್ದಾರೆ?. 40 ಪರ್ಸೆಂಟ್ ಕಮಿಷನ್ ದಾಖಲೆ ಕೇಳ್ತಾರೆ. ನಾವು ದಾಖಲೆ ಇಟ್ಟು ಮಾತನಾಡುತ್ತಿದ್ದೇವೆ. ಪ್ರಗತಿ ಗ್ರೂಪ್ನಲ್ಲಿ ಅಶ್ವಥ್ ನಾರಾಯಣ ಹಾಗು ಕುಟುಂಬದ ಪಾಲುದಾರಿಕೆ ಇದೆ. ಇದರ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ. ಹಗರಣದ ಬಗ್ಗೆ ನಾವು ದೂರು ದಾಖಲಿಸುತ್ತೇವೆ ಎಂದು ಹೇಳಿದರು.