ಬೆಂಗಳೂರು:ಒಂದೆಡೆ ಬೆಳ್ಳಳ್ಳಿ ಕ್ವಾರಿ ಭರ್ತಿಯಾಗಿ ಬಿಬಿಎಂಪಿಗೆ ತಲೆನೋವಾಗಿದ್ದು, ಅದರ ನಡುವೆ ಸ್ಥಳೀಯರ ಪ್ರತಿಭಟನೆ ಬಿಸಿ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಬೆಳ್ಳಳ್ಳಿ ಕ್ವಾರಿಗೆ ವಿಲೇವಾರಿ ಮಾಡದಂತೆ ಪ್ರತಿಭಟನೆ ನಡೆಸಲಾಗುತ್ತಿದೆ. ಹಿಂದೆ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿದ್ದಾಗ ನಗರಕ್ಕೆ ಗಾರ್ಬೇಜ್ ಸಿಟಿ ಎಂಬ ಹಣೆಪಟ್ಟಿ ಸಿಕ್ಕಿತ್ತು. ಈಗ ಮತ್ತೊಮ್ಮೆ ಆ ಭೀತಿ ಎದುರಾಗಿದೆ.
ಇಂದಿನಿಂದ ಬೆಳ್ಳಳ್ಳಿ ಕ್ವಾರಿ ಬಂದ್ ಹಿನ್ನೆಲೆಯಲ್ಲಿ 2,500 ಟನ್ ಕಸ ಬೆಂಗಳೂರಿನಲ್ಲೇ ಉಳಿಯಲಿದೆ. ಬೆಳ್ಳಳ್ಳಿ ಅಭಿವೃದ್ಧಿಗೆ ಅನುದಾನ ನೀಡಿಲ್ಲ ಎಂದು ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದು, ಇಂದಿನಿಂದ ಕಸದ ಲಾರಿಗಳು ಹೋಗದಂತೆ ತಡೆಯಲಾಗುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ನಿತ್ಯ ಬೆಳ್ಳಳಿ ಕ್ವಾರಿಗೆ 300 ಲಾರಿಗಳ ಮೂಲಕ 2,500 ಟನ್ ಕಸ ವಿಲೇವಾರಿ ಮಾಡಲಾಗುತ್ತಿತ್ತು. ಇಂದು100 ಲಾರಿಗಳನ್ನು ಬಿಟ್ಟು, ಉಳಿದಂತೆ ಬರುವ ಕಸವಿಲೇವಾರಿ ಲಾರಿಗಳ ಎಂಟ್ರಿಗೆ ಸ್ಥಳೀಯರು ಅಡ್ಡಿಪಡಿಸಿದ್ದಾರೆ. ಈ ಕ್ವಾರಿ ಅಭಿವೃದ್ಧಿಗಾಗಿ 110 ಕೋಟಿ ಅನುದಾನ ಕೊಡಿ ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ.
ಬೆಳ್ಳಳ್ಳಿ ಹಾಗೂ ಸುತ್ತಲಿನ ಪ್ರದೇಶಗಳ ರಸ್ತೆ ,ಆರೋಗ್ಯ , ಚರಂಡಿ ಅಭಿವೃದ್ಧಿಗೆ ಪಾಲಿಕೆ ಹಣ ನೀಡಬೇಕು. ಕಸ ಹಾಕುತ್ತಿರೋ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಹಳ್ಳಿಗಳ ಅಭಿವೃದ್ಧಿಗೆ ಹಣ ನೀಡಬೇಕು. ಸದ್ಯ ಬಜೆಟ್ ತಡೆ ಹಿಡಿದ ಬೆನ್ನಲ್ಲೇ ಕ್ವಾರಿಗಳಿಗೆ ನೀಡಿರೊ ಅಭಿವೃದ್ಧಿ ಹಣವೂ ಸ್ಥಗಿತವಾಗಿದೆ. ಹೀಗಾಗಿ ಪ್ರತಿಭಟನೆ ಆರಂಭವಾಗಿದ್ದು, ಇಂದಿನಿಂದ ನಗರದ ಕಸ ಸಮಸ್ಯೆ ಬಿಗಡಾಯಿಸುವ ಸಾಧ್ಯತೆ ಇದೆ.