ಬೆಂಗಳೂರು: ಭೂಗತ ಲೋಕದ ಅಧಿಪತ್ಯಕ್ಕೆ ಕಿತ್ತಾಟ ಮಾಡುತ್ತಿರುವ ವಿಚಾರ ಸದ್ಯ ಅಂಡಲರ್ವರ್ಲ್ಡ್ ಲೋಕದಲ್ಲಿ ಸದ್ದು ಮಾಡುತ್ತಿದೆ. ಬನ್ನಂಜೆ ರಾಜ ಮತ್ತು ರವಿ ಪೂಜಾರಿ ಸಹಚರರ ನಡುವೆ ಕಿತ್ತಾಟ ನಡೆತಿದೆ ಎಂದು ಹೇಳಲಾಗುತ್ತಿದ್ದು, ಸದ್ಯ ಗುಪ್ತಚರ ಇಲಾಖೆ ಇವರ ಮೇಲೆ ನಿಗಾ ಇಟ್ಟಿದೆ.
ರವಿ ಪೂಜಾರಿ, ಬನ್ನಂಜೆ ರಾಜ ಮಂಗಳೂರು ಮೂಲದವರು. ಈ ಹಿಂದೆ ಇಬ್ಬರು ಭೂಗತ ಲೋಕದ ಹಿಡಿತ ಸಾಧಿಸಿ ಸದ್ಯ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಆದರೆ, ಹೊರಗಡೆ ಇವರ ಸಹಚರರು ಅಧಿಪತ್ಯ ವಿಚಾರಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ವಾರ್ ಮಾಡುತ್ತಿದ್ದಾರೆ ಎಂದು ಹೇಳಲಾಗ್ತಿದೆ.
ದಿವಗಂತ ಮುತ್ತಪ್ಪ ರೈ ಸುಮಾರು ಎರಡು ದಶಕದಿಂದ ಭೂಗತ ಲೋಕದಲ್ಲಿ ಮೆರೆದಿದ್ದರು. ಹಾಗೆ ರವಿ ಪೂಜಾರಿ ವಿದೇಶದಲ್ಲಿ ಅಡಗಿ ಕುಳಿತು ಅಲ್ಲಿಂದಲೇ ತನ್ನ ಸಾಮ್ರಾಜ್ಯ ಅಧಿಪತ್ಯ ಸಾಧಿಸಿದ್ದ. ಆದರೆ, ಇತ್ತೀಚೆಗೆ ಕರ್ನಾಟಕ ಪೊಲೀಸರು ಇವನನ್ನು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. ಅಲ್ಲದೆ ಮುತ್ತಪ್ಪ ರೈ ಕೂಡ ನಿಧನವಾಗಿದ್ದು, ಇದಾದ ಬಳಿಕ ಕರಾವಳಿಯ ಅಂಡರ್ ವರ್ಲ್ಡ್ ಡಾನ್ ಯಾರು ಎಂಬ ಚರ್ಚೆ ಭೂಗತ ಲೋಕದಲ್ಲಿ ಹರಿದಾಡುತ್ತಿದೆ.
ಇದೇ ವಿಚಾರಕ್ಕಾಗಿ ಸಹಚರರ ಮಡುವೆ ರಕ್ತದೋಕುಳಿ ಹರಿಯುತ್ತಿದೆ. ಕುಳಿತ ಜಾಗದಲ್ಲೇ ಶ್ರೀಮಂತರನ್ನ ಟಾರ್ಗೆಟ್ ಮಾಡಿ ಹಫ್ತಾ ವಸೂಲಿ ಮಾಡುತ್ತಿದ್ದ ಗ್ಯಾಂಗ್ ಲೀಡರ್ ಯಾರು ಅನ್ನೋ ಪ್ರಶ್ನೆ ಎದ್ದಿದೆ. ಸದ್ಯ ವಿರೋಧಿ ಗುಂಪುಗಳೇ ಹತ್ಯೆಗೆ ಸ್ಕೆಚ್ ಹಾಕಿ ಅಧಿಪತ್ಯ ಸಾಧಿಸಲು ಮುಂದಾಗುತ್ತಿದ್ದಾರೆ. ಇದೇ ಕಾರಣಕ್ಕೆ ರವಿ ಪೂಜಾರಿಯ ಸಹಚರ ಮನೀಶ್ ಹತ್ಯೆ ಕೂಡ ಇತ್ತೀಚೆಗೆ ನಡೆದಿದೆ ಎನ್ನಲಾಗುತ್ತಿದೆ.
ಭೂಗತ ಲೋಕದಲ್ಲಿ ಕರಾವಳಿಗೆ 60 ವರ್ಷಗಳ ಇತಿಹಾಸವಿದ್ದು, ಭೂಗತ ಪಾತಕಿಗಳೆಲ್ಲ ಭಾಗಶಃ ಇಲ್ಲಿನವರೇ ಆಗಿದ್ದಾರೆ. ರಮೇಶ್ ಪೂಜಾರಿ, ಫ್ರಾನ್ಸಿಸ್ ಕುಟ್ಹಿನೋ, ಎರಿಕ್ ಸಾಧು ಶೆಟ್ಟಿ, ಹೇಮಂತ್ ಪೂಜಾರಿ, ಪಾಂಗಾಳ ರಾಮ, ಬನ್ನಂಜೆ ರಾಜ, ರವಿ ಪೂಜಾರಿ, ವಿಕ್ಕಿ ಶೆಟ್ಟಿ, ಕೊರಗ ವಿಶ್ವನಾಥ್ ಶೆಟ್ಚಿ, ಕಲಿ ಯೋಗೀಶ ಇವರೆಲ್ಲ ಕರಾವಳಿ ಭಾಗದವರಾಗಿದ್ದು ಮುಂಬೈ ಭೂಗತ ಲೋಕದಲ್ಲಿ ಕಲಹ ಉಂಟಾಗಿ ವಿದೇಶಕ್ಕೆ ಸೇರಿಕೊಂಡರು.
ಇವರ ಹುಟ್ಟಡಗಿಸಲು ಪೊಲೀಸ್ ಇಲಾಖೆ ಕೂಡ ಎನ್ಕೌಂಟರ್ ಆರಂಭಿಸಿತ್ತು. ಆಗ ಭಾರತದಲ್ಲಿನ ಭೂಗತ ಪಾತಕಿಗಳ ನೆಟ್ವರ್ಕ್ ಬೆಳೆಯ ತೊಡಗಿತ್ತು. ಬಹಳಮಂದಿ ಪ್ರಮುಖ ಡಾನ್ ಗಳ ಅಡಿ ಕೆಲಸ ಮಾಡಿ ಅದರಿಂದ ಹೊರ ಬಂದು ತಮ್ಮದೇ ಗ್ಯಾಂಗ್ ಕಟ್ಟಿಕೊಂಡು ಮೆರೆಯಲು ಮುಂದಾಗಿದ್ದರು.
ರವಿ ಪೂಜಾರಿ ಮತ್ತು ಬನ್ನಂಜೆ ಕೂಡ ಪಾತಕ ಲೋಕದಲ್ಲಿ ಅಧಿಪತ್ಯ ಮಾಡಿ ಹಲವಾರು ಜನರಿಂದ ಹಫ್ತಾ ವಸೂಲಿ ಸೇರಿದಂತೆ ಅನೇಕ ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಸದ್ಯ ಇದರಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದು, ಹೊರಗಿರುವ ಶಿಷ್ಯಂದಿರಿಂದ ಡಾನ್ ಪಟ್ಟಕ್ಕಾಗೆ ಕೆಲಸ ನಡೆಯುತ್ತಿದೆ. ರವಿ ಪೂಜಾರಿ ಸಹಚರರು ಬನ್ನಂಜೆ ರಾಜ ಸಹಚರರ ಟಾರ್ಗೆಟ್ ಮಾಡಿದರೆ, ಇತ್ತ ಬನ್ನಂಜೆ ರಾಜ ಸಹಚರರನ್ನ ರವಿ ಪೂಜಾರಿ ಕಡೆಯವರು ಟಾರ್ಗೆ ಟ್ ಮಾಡುತ್ತಿದ್ದಾರೆ. ಹತ್ಯೆ ಮಾಡಿ ಡಾನ್ ಪಟ್ಟ ಉಳಿಸಿಕೊಳ್ಳಲು ಭೂಗತ ಲೋಕದಲ್ಲಿ ತೆರೆ ಮರೆಯ ಕಸರತ್ತು ನಡೆಯುತ್ತಿದೆ ಎನ್ನಲಾಗುತ್ತದೆ. ಸದ್ಯ ಪೊಲೀಸರು ಅಲರ್ಟ್ ಆಗಿದ್ದು, ಮುಂದೆ ಯಾವುದೇ ಘಟನೆಗಳು ನಡೆಯದ ರೀತಿ ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ.