ಕರ್ನಾಟಕ

karnataka

ETV Bharat / state

ಗಣೇಶ ಹಬ್ಬ, ಮೊಹರಂ ಆಚರಣೆ: ರಾಜ್ಯ ಸರ್ಕಾರದಿಂದ ಮಹತ್ವದ ಮಾರ್ಗಸೂಚಿ ರಿಲೀಸ್​ - ಮೊಹರಂ ಆಚರಣೆ ಮಾರ್ಗಸೂಚಿ

ಮಹಾಮಾರಿ ಕೋವಿಡ್​ ಸಂದರ್ಭದಲ್ಲೇ ರಾಜ್ಯದಲ್ಲಿ ಗಣೇಶ ಹಬ್ಬ, ಮೊಹರಂ ಸೇರಿದಂತೆ ಅನೇಕ ಮಹತ್ವದ ಹಬ್ಬಗಳು ಎದುರಾಗುತ್ತಿವೆ. ಹೀಗಾಗಿ ಸರ್ಕಾರ ಮಹತ್ವದ ಮಾರ್ಗಸೂಚಿ ಹೊರಡಿಸಿದೆ.

Karnataka Government
Karnataka Government

By

Published : Aug 12, 2021, 7:15 PM IST

ಬೆಂಗಳೂರು:ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಗಣೇಶ ಚತುರ್ಥಿ, ಮೊಹರಂ, ದಸರಾ ಸೇರಿದಂತೆ ಇತರೆ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಕೋವಿಡ್-19 ಸೋಂಕು ತಡೆಗಟ್ಟಲು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಸರ್ಕಾರ ಹೊರಡಿಸಿದೆ. ಪ್ರಮುಖವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮೆರವಣಿಗೆ, ದೇಗುಲಗಳಲ್ಲಿ ನಿತ್ಯ ಸ್ಯಾನಿಟೈಸೇಷನ್, ಕಡ್ಡಾಯವಾಗಿ ಮಾಸ್ಕ್ ಹಾಗೂ ದೈಹಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ.

2021ರ ಆಗಸ್ಟ್​​ನಿಂದ ಅಕ್ಟೋಬರ್ ತಿಂಗಳವರೆಗೆ ಆಚರಿಸಲಾಗುವ ಹಬ್ಬಗಳಾದ ಮೊಹರಂ, ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದುರ್ಗಾ ಪೂಜೆ ಮೊದಲಾದ ಹಬ್ಬಗಳನ್ನು ಆಚರಿಸುವಾಗ ಜನದಟ್ಟಣೆ ಮತ್ತು ಒಗ್ಗೂಡುವಿಕೆ ತಡೆಗಟ್ಟಲು ಸ್ಥಳೀಯ ಮಟ್ಟದಲ್ಲಿ ನಿರ್ಬಂಧ ವಿಧಿಸುವಂತೆ ಸಲಹೆ ನೀಡಲಾಗಿದೆ. ಕೋವಿಡ್-19 ಸಾಂಕ್ರಾಮಿಕ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ.

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್​-19 ಸಾಂಕ್ರಾಮಿಕ ಸೋಂಕು ಹೆಚ್ಚಿನ ರೀತಿಯಲ್ಲಿ ಹರಡದಂತೆ ಸರಪಳಿ ಮುರಿಯಲು ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ.

ಇದನ್ನೂ ಓದಿರಿ: ಚಿನ್ನದ ಬೆಲೆಯಲ್ಲಿ 422 ರೂ. ಏರಿಕೆ.. ಸತತ ಇಳಿಕೆ ನಂತರ ಶಾಕ್​ ನೀಡಿದ ಹಳದಿ ಲೋಹ!

ಮಾರ್ಗಸೂಚಿ ಅನ್ವಯ:ಸಾಮಾಜಿಕ/ರಾಜಕೀಯ/ಕ್ರೀಡಾ/ಮನೋರಂಜನೆ/ಶೈಕ್ಷಣಿಕ/ಸಾಂಸ್ಕೃತಿಕ/ಧಾರ್ಮಿಕ ಕಾರ್ಯಕ್ರಮ/ಇತರೆ ಒಗ್ಗೂಡುವಿಕೆಗಳನ್ನು ಮತ್ತು ಬೃಹತ್ ಸಭೆ-ಸಮಾರಂಭಗಳನ್ನು ನಿಷೇಧ.

ಸರ್ಕಾರದ ಆದೇಶದಲ್ಲಿ ಪೂಜಾ ಸ್ಥಳಗಳು (ದೇವಸ್ಥಾನಗಳು, ಮಸೀದಿಗಳು, ಚರ್ಚ್ ಗಳು, ಗುರುದ್ವಾರಗಳು ಮತ್ತು ಇತರೆ ಧಾರ್ಮಿಕ ಸ್ಥಳಗಳು) ತೆರೆಯಲು ಮತ್ತು ಕೋವಿಡ್-19 ಸಮುಚಿತ ವರ್ತನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಟ್ಟು ಪೂಜಾ ಕಾರ್ಯಗಳನ್ನು ಕೈಗೊಳ್ಳಲು ಅನುಮತಿಸಿದೆ. ಆದರೆ, ಜಾತ್ರೆಗಳು, ದೇವಾಲಯದ ಹಬ್ಬಗಳು, ಮೆರವಣಿಗೆ ಮತ್ತು ಸಭೆ - ಸಮಾರಂಭಗಳಿಗೆ ಅನುಮತಿ ಇರುವುದಿಲ್ಲ.

ಗಣೇಶ ಹಬ್ಬ ಸಂಬಂಧದ ಮಾರ್ಗಸೂಚಿಗಳು :

1.ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ, ಭಕ್ತಿಪೂರ್ವಕವಾಗಿ ದೇವಸ್ಥಾನದೊಳಗೆ ಮತ್ತು ತಮ್ಮ ತಮ್ಮ ಮನೆಗಳಲ್ಲಿ ಆಚರಿಸತಕ್ಕದ್ದು, ಇದನ್ನು ಹೊರತುಪಡಿಸಿ, ಬೇರೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ, ಹೊರಾಂಗಣಗಳಲ್ಲಿ ಚಪ್ಪರ/ಪೆಂಡಾಲ್/ಶಾಮಿಯಾನ ವೇದಿಕೆಗಳನ್ನು ನಿರ್ಮಿಸಿ ಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವಂತಿಲ್ಲ

2. ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ರೀತಿಯ ಮೆರವಣಿಗೆ / ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ.

3. ಪಾರಂಪರಿಕ ಗೌರಿ-ಗಣೇಶ ಮೂರ್ತಿಯನ್ನು ಪೂಜಿಸುವವರು ಅವುಗಳನ್ನು ಮನೆಯಲ್ಲಿಯೇ ನಿಮಜ್ಜನ ಮಾಡಬೇಕು. ಅಥವಾ ಮೂರ್ತಿಗಳನ್ನು ಅತೀ ಸಮೀಪವಾಗುವಂತಹ ಮಾರ್ಗಗಳನ್ನು ಬಳಸಿಕೊಂಡು ಮಹಾನಗರ ಪಾಲಿಕೆ / ಜಿಲ್ಲಾಡಳಿತ / ಹತ್ತಿರದ ಸ್ಥಳೀಯ ಸಂಸ್ಥೆಗಳ /ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಈಗಾಗಲೇ ನಿರ್ಮಿಸಲಾದ ಹೊಂಡ, ಕಲ್ಯಾಣಿ, ಅಥವಾ ಮೊಬೈಲ್ ಟ್ಯಾಂಕ್‌ಗಳಲ್ಲಿ ಅಥವಾ ಕೃತಕ ಟ್ಯಾಂಕರ್‌ಗಳಲ್ಲಿ ನಿಮಜ್ಜನ ಮಾಡಬೇಕು.

4. ಗಣೇಶ ಚತುರ್ಥಿ ಆಚರಿಸುವ ದೇವಸ್ಥಾನಗಳಲ್ಲಿ ದಿನನಿತ್ಯ ಸಾನಿಟೈಸೇಷನ್ ಮಾಡತಕ್ಕದ್ದು. ಸಾರ್ವಜನಿಕ ದರ್ಶನಕ್ಕಾಗಿ ಆಗಮಿಸುವ ಭಕ್ತಾದಿಗಳಿಗೆ ಸ್ಪ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಬೇಕು.

5. ದರ್ಶನಕ್ಕಾಗಿ ಬರುವ ಭಕ್ತರಿಗೆ ಕೋವಿಡ್-19 ಸಮುಚಿತ ವರ್ತನೆಯಂತೆ ಕಡ್ಡಾಯವಾಗಿ ಮುಖಗವಸನ್ನು ಧರಿಸುವುದು, ಕನಿಷ್ಠ 06 ಅಡಿ ಸಾಮಾಜಿಕ ಅಂತರವನ್ನು ಗುರುತಿಸುವುದು ಹಾಗೂ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ಮನೋರಂಜನೆ/ಸಾಂಸ್ಕೃತಿಕ/ಧಾರ್ಮಿಕ ಕಾರ್ಯಕ್ರಮಗಳು/ ಇತರೆ ಒಗ್ಗೂಡುವಿಕೆಗಳನ್ನು ಮತ್ತು ಬೃಹತ್ ಸಭೆ-ಸಮಾರಂಭಗಳನ್ನು ನಿಷೇಧಿಸಲಾಗಿದ್ದು, ಜಾತ್ರೆಗಳು, ದೇವಾಲಯದ ಹಬ್ಬಗಳು, ಮೆರವಣಿಗೆ ಮತ್ತು ಸಭೆ ಸಮಾರಂಭಗಳಿಗೆ ಅನುಮತಿ ನೀಡಲಾಗಿರುವುದಿಲ್ಲ. ಆದ್ದರಿಂದ ಮೇಲ್ಕಂಡ ಹಬ್ಬಗಳ ಸಂದರ್ಭದಲ್ಲಿ ಯಾವುದೇ ವಿಧದ ಮೆರವಣಿಗೆಯನ್ನು ಮಾಡಬಾರದು.

ಹಬ್ಬ-ಹರಿದಿನಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯಗಳು ಉಂಟಾಗಲು ಪೂರಕವಾಗಿರುವುದರಿಂದ ಮೊಹರಂ ಮತ್ತು ಗಣೇಶೋತ್ಸವ ಹಬ್ಬವನ್ನು ಅದೇ ರೀತಿಯಿಂದಲೇ ಆಚರಿಸುವ ಮೂಲಕ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಭಂಗ ಬಾರದಂತೆ ಕಾಪಾಡಬೇಕು.

ಮೊಹರಂ ಹಬ್ಬ ಆಚರಿಸುವ ಸಂಬಂಧದ ಮಾರ್ಗಸೂಚಿಗಳು :

1. ಸಾರ್ವಜನಿಕ ಸ್ಥಳಗಳಲ್ಲಿ ಆಲಂಗಳನ್ನು/ಪಂಜಾವನ್ನು ಸ್ಥಾಪಿಸುವುದನ್ನು ನಿರ್ಬಂಧಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮೊಹರಂ ಪ್ರಾರ್ಥನಾ ಸಭೆ ಮತ್ತು ಮೆರವಣಿಗೆಯನ್ನು ನಿಷೇಧಿಸಲಾಗಿದೆ. ಮೊಹರಂ ಸಂಬಂಧಿತ ಆಚರಣೆಗಳಲ್ಲಿ ಭಾಗವಹಿಸುವ ಭಕ್ತಾದಿಗಳು ಸೂಕ್ತ ಸಾಮಾಜಿಕ ಅಂತರದೊಂದಿಗೆ ಕನಿಷ್ಠ ಸಂಖ್ಯೆಯಲ್ಲಿ ಭಾಗವಹಿಸಬೇಕು.

2. ಖಬರಸ್ಥಾನ್ ಒಳಗೊಂಡಂತೆ ಯಾವುದೇ ಖಾಲಿ ಜಾಗಗಳಲ್ಲಿ ಯಾವುದೇ ತರಹದ ಸಭೆ ಏರ್ಪಡಿಸುವುದನ್ನು ನಿರ್ಬಂಧಿಸಲಾಗಿದೆ. ಖಬರಸ್ಥಾನ್‌ಗಳಿಗೆ ಕೇವಲ ದಫನ ಮಾಡಲು ಮಾತ್ರ ಅನುಮತಿ ನೀಡಿದ್ದು, ಮೊಹರಂಗೆ ಸಂಬಂಧಿಸಿದ ಆಚರಣೆಗಳಿಗೆ ಅನುಮತಿ ಇರುವುದಿಲ್ಲ.

3. ಪ್ರಾರ್ಥನಾ ಸ್ಥಳಗಳಲ್ಲಿ ಮುಖಗವಸನ್ನು ( ಮಾಸ್ಕ್) ಕಡ್ಡಾಯವಾಗಿ ಧರಿಸಬೇಕು.

4.60 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು.

5. ಕೋವಿಡ್-19 ಸಮುಚಿತ ವರ್ತನೆಗಳೊಂದಿಗೆ, ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಡೆಸತಕ್ಕದ್ದು, ಒಂದು ವೇಳೆ ಹೆಚ್ಚು ಜನರು ಆಗಮಿಸಿದ್ದಲ್ಲಿ, ಎರಡು ಅಥವಾ ಹೆಚ್ಚಿನ ಪಾಳಿಯಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಡೆಸಬೇಕು.

6.ಕೋವಿಡ್-19 ಸಮುಚಿತ ವರ್ತನೆಯಂತೆ ಮಸೀದಿಗಳಲ್ಲಿ ನಮಾಜ್ ನಿರ್ವಹಿಸುವವರ ಮಧ್ಯ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳತಕ್ಕದ್ದು, ಆಗಾಗ ಕೈಗಳನ್ನು ಸೋಪು ಮತ್ತು ಸ್ಯಾನಿಟೈಸರ್‌ಗಳಿಂದ ಶುಚಿಗೊಳಿಸಿಕೊಳ್ಳತಕ್ಕದ್ದು, ಮಸೀದಿಗಳಲ್ಲಿ ಪುವೇಶಿಸುವ ಮೊದಲು, ದೇಹದ ತಾಪಮಾನವನ್ನು ತಪಾಸಣೆ ಮಾಡುವುದು ಕಡ್ಡಾಯ.

7. ಭಕ್ತಾದಿಗಳು ಪ್ರವೇಶಿಸುವ ದ್ವಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡುವುದನ್ನು ತಡೆಗಟ್ಟುವುದು. ಆಡಳಿತ ಮಂಡಳಿ/ಮುತವಲ್ಲಿ/ಆಡಳಿತಾಧಿಕಾರಿ ಇವರು ಭಕ್ತಾದಿಗಳು ಕುಳಿತುಕೊಳ್ಳುವ ಗರಿಷ್ಠ ಸಂಖ್ಯೆಯನ್ನು ಮುಖ್ಯದ್ವಾರದ ಬಳಿ ಪ್ರದರ್ಶಿಸಬೇಕು.

8. ಮಸೀದಿಗಳಲ್ಲಿ ಪ್ರಾರ್ಥನೆಯಲ್ಲಿ ಭಾಗವಹಿಸುವವರು ತಮ್ಮ ತಮ್ಮ ಮನೆಗಳಿಂದ ಮುಸಲ್ಮಾವನ್ನು (ಜಾಯನಮಾಜ್) ಕಡ್ಡಾಯವಾಗಿ ತರಬೇಕು. ಪರಸ್ಪರ ಹಸ್ತಲಾಘವ ಮತ್ತು ಆಲಿಂಗನಗಳನ್ನು ನಿರ್ಬಂಧಿಸಲಾಗಿದೆ.

9. ಮಸೀದಿಗಳನ್ನು ಹೊರತುಪಡಿಸಿ ಇತರೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಅಂದರೆ, ಸಭಾಂಗಣ, ಸಮುದಾಯ ಭವನ, ಶಾದಿ ಮಹಲ್‌ ಮತ್ತಿತರ ತೆರೆದ ಜಾಗಗಳಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಯನ್ನು ಆಯೋಜಿಸುವಂತಿಲ್ಲ.

10. ಮೊಹರಂ ಪ್ರಯುಕ್ತ ಯಾವುದೇ ರೀತಿಯ ಮೆರವಣಿಗೆ / ಸಾರ್ವಜನಿಕ ಸ್ಥಳಗಳಲ್ಲಿ ಭಾಷಣ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ.

11. ಭಕ್ತಾದಿಗಳು ಯಾವ ಯಾವ ಕೆಲಸವನ್ನು ನಿರ್ವಹಿಸುವುದು/ಯಾವ ಯಾವ ಕೆಲಸವನ್ನು ನಿರ್ವಹಿಸಬಾರದು ಎಂಬ ಬಗ್ಗೆ ಧ್ವನಿ ವರ್ಧಕದ ಮೂಲಕ ಸೂಚಿಸಬೇಕು.

ABOUT THE AUTHOR

...view details