ಬೆಂಗಳೂರು:ವಾರದೊಳಗೆ ರಾಜ್ಯದ ಹಣ್ಣು, ತರಕಾರಿಗಳ ರಫ್ತು ಶುರುವಾಗಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ತೋಟಗಾರಿಕೆ ಇಲಾಖೆ ಸಚಿವ ಡಾ. ನಾರಾಯಣಗೌಡ ಚರ್ಚೆ ನಡೆಸಿದ್ದಾರೆ.
ಪ್ರತಿ ವಾರ 220 ಮೆಟ್ರಿಕ್ ಟನ್ಗೂ ಅಧಿಕ ಹಣ್ಣು ಮತ್ತು ತರಕಾರಿಗಳು ವಿದೇಶಕ್ಕೆ ರಫ್ತಾಗಲಿದೆ. ಕಾರ್ಗೋ ದರ ಏರಿಕೆಯಿಂದಾಗಿ ರಫ್ತು ಸ್ಥಗಿತವಾಗಿತ್ತು. ತೋಟಗಾರಿಕೆ ಇಲಾಖೆ ಸಚಿವ ನಾರಾಯಣಗೌಡ ರಫ್ತುದಾರರು ಹಾಗೂ ಕೆಪೆಕ್, ಎಪೆಡಾ ಸಂಸ್ಥೆಗಳ ಜೊತೆ ಸಭೆ ನಡೆಸಿದ್ದಾರೆ.
ರಫ್ತಿಗೆ ಇರುವ ಸಮಸ್ಯೆಯ ಮಾಹಿತಿಯನ್ನು ಸಚಿವರು ಪಡೆದಿದ್ದು, ಇಂದು ರಫ್ತುದಾರರು, ಆಯಾ ದೇಶಗಳಲ್ಲಿನ ತರಕಾರಿ ಹಾಗೂ ಹಣ್ಣಿನ ಬೇಡಿಕೆಯ ಕುರಿತು ಮಾಹಿತಿ ಸಂಗ್ರಹಿಸಿ ಸಚಿವರಿಗೆ ನೀಡಿದ್ದಾರೆ. ಈ ಮಾಹಿತಿ ಪಡೆದು ಸಚಿವರು ಸಿಎಂ ಜೊತೆ ಚರ್ಚಿಸಿದ್ದಾರೆ. ಕಾರ್ಗೋ ದರ ಇಳಿಕೆ ಆಗಬೇಕು. ರಾಜ್ಯದ ಹಣ್ಣು, ತರಕಾರಿಗೆ ಕಾರ್ಗೋದವರು ಆದ್ಯತೆ ನೀಡಬೇಕು ಎಂಬಿತ್ಯಾದಿ ವಿಚಾರದ ಬಗ್ಗೆ ಸಿಎಂ ಬಳಿ ಸಚಿವರು ಚರ್ಚಿಸಿದ್ದು, ಸಿಎಂ ಮೂಲಕ ಕೇಂದ್ರ ವಿಮಾನಯಾನ ಸಚಿವರ ಜೊತೆ ಚರ್ಚಿಸಿ, ಒಂದೆರಡು ದಿನಗಳಲ್ಲಿ ರಫ್ತಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.
ಹಾಗೆಯೇ ವಿವಿಧ ರಫ್ತುದಾರರಿಂದ 10ಕ್ಕೂ ಹೆಚ್ಚು ದೇಶಗಳಿಗೆ ಹಣ್ಣು, ತರಕಾರಿ ರಫ್ತಾಗಲಿದೆ. ಬೇರೆ ಬೇರೆ ರಫ್ತುದಾರರಿಂದ ಪ್ರತಿ ವಾರ ಲಂಡನ್ಗೆ 60 ಮೆಟ್ರಿಕ್ ಟನ್ ಹಣ್ಣು ಮತ್ತು ತರಕಾರಿ, ದೋಹಾ, ಖತಾರ್ ದುಬೈಗೆ ವಾರಕ್ಕೆ 89 ಮೆಟ್ರಿಕ್ ಟನ್, ಯುಎಸ್ಎ, ಕೆನಡಾಗೆ ವಾರಕ್ಕೆ 18 ಮೆಟ್ರಿಕ್ ಟನ್, ಆಸ್ಟ್ರೇಲಿಯಾಗೆ ವಾರಕ್ಕೆ 22.50 ಮೆಟ್ರಿಕ್ ಟನ್, ಮಾಲ್ಡೀವ್ಸ್ಗೆ ವಾರಕ್ಕೆ 25 ಮೆಟ್ರಿಕ್ ಟನ್, ಇರಾನ್ಗೆ ವಾರಕ್ಕೆ 5 ಮೆಟ್ರಿಕ್ ಟನ್, ಸಿಂಗಾಪುರ್ಗೆ ವಾರಕ್ಕೆ 2 ಮೆಟ್ರಿಕ್ ಟನ್ ಹಣ್ಣು ಮತ್ತು ತರಕಾರಿ ರಫ್ತಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.