ಬೆಂಗಳೂರು :ಸಾರ್ವಜನಿಕ ಹಿತಾಸಕ್ತಿ ಹೊಂದಿದ ಖಾಸಗಿ ಸಂಸ್ಥೆಗಳು ರೈತರ ಬದುಕು ಹಸನು ಮಾಡುವ ಸತ್ಕಾರ್ಯದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಲು ಮುಂದಾಗಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.
ರೈತರ ಬದುಕು ಹಸನು ಮಾಡೋ ಸತ್ಕಾರ್ಯದಲ್ಲಿ ಕೈ ಜೋಡಿಸಿ: ಸಿಎಂ ಬಿಎಸ್ವೈ ಮನವಿ
ಬಾಯರ್ ಕ್ರಾಪ್ ಸೈನ್ಸ್ ಲಿಮಿಟೆಡ್ ಸಂಸ್ಥೆ ವತಿಯಿಂದ ಸಣ್ಣ ಹಿಡುವಳಿದಾರರಿಗೆ ಉಚಿತ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಬಾಯರ್ ಕ್ರಾಪ್ ಸೈನ್ಸ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಸಣ್ಣ ಹಿಡುವಳಿದಾರರಿಗೆ ಉಚಿತ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಣ್ಣ ಹಿಡುವಳಿದಾರರಿಗೆ ಬಾಯರ್ ಕ್ರಾಪ್ ಸೈನ್ಸ್ ಲಿಮಿಟೆಡ್ನಿಂದ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳ ಉಚಿತ ಕಿಟ್ ನೀಡಲು ಮುಂದಾಗಿರುವುದು ಸಂತಸದ ಸಂಗತಿ. ಕಾರ್ಯಕ್ರಮಕ್ಕೆ ಸಂತೋಷದಿಂದ ಚಾಲನೆ ನೀಡಿದ್ದೇನೆ. ಸಣ್ಣ ಹಿಡುವಳಿದಾರರಿಗೆ ಉತ್ತಮ ಕೃಷಿ ಕೈಗೊಳ್ಳಲು ಅನುಕೂಲವಾಗುವಂತಹ ಬೀಜ, ಆಧುನಿಕ ಕೃಷಿ ಪದ್ಧತಿಯ ಮಾಹಿತಿಯನ್ನೊಳಗೊಂಡ ಕಿಟ್ ಉಚಿತವಾಗಿ ವಿತರಿಸುತ್ತಿರುವುದು ಔಚಿತ್ಯಪೂರ್ಣವಾಗಿದೆ ಎಂದರು.
ಈ ಸನ್ನಿವೇಶದಲ್ಲಿ ರೈತರು ತಮ್ಮ ಕುಟುಂಬ, ಕೃಷಿ, ಪಶುಸಂಗೋಪನೆಗಳ ನಿರ್ವಹಣೆಯನ್ನು ನಡೆಸುವುದು ಕಷ್ಟಕರವಾಗಿದೆ. ಕೋವಿಡ್ ಸಂಕಷ್ಟದಿಂದ ರಾಜ್ಯದ ಜನರು ಹೊರಬರಲು ಸರ್ಕಾರ 2,284 ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಘೋಷಿಸಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸಿ ಎಲ್ಲ ರೀತಿಯ ಬೆಂಬಲ ನೀಡಲು ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಉಪಮುಖ್ಯಮಂತ್ರಿ ಹಾಗೂ ಸಚಿವ ಅಶ್ವತ್ಥ್ ನಾರಾಯಣ, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್, ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ. ವಿ.ರಮಣರೆಡ್ಡಿ ಹಾಗೂ ನಿರ್ದೇಶಕಿ ಮೀನಾ ನಾಗರಾಜ್ ಉಪಸ್ಥಿತರಿದ್ದರು.