ಆರೋಪಿಗಳ ಕುರಿತು ಮಾಹಿತಿ ನೀಡುತ್ತಿರುವ ಡಿಸಿಪಿ ಕೃಷ್ಣಕಾಂತ್ ಬೆಂಗಳೂರು:ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ದಾಳಿ ಮಾಡುವುದಾಗಿ ಸರ್ಕಾರಿ ಮಹಿಳಾ ಅಧಿಕಾರಿಯನ್ನು ಬೆದರಿಸಿ ಹಣ ವಸೂಲಿ ಮಾಡಿದ್ದ ಆಂಧ್ರ ಮೂಲದ ಮೂವರು ಆರೋಪಿಗಳನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ನಗರ ಯೋಜನೆ ವಿಭಾಗದ ಜಂಟಿ ನಿರ್ದೇಶಕಿ ಆಶಾ ಸುರೇಶ್ ನೀಡಿದ ದೂರಿನ ಮೇರೆಗೆ ಆಂಧ್ರದ ಕಡಪ ಮೂಲದ ನಾಗೇಶ್ವರ್ ರೆಡ್ಡಿ, ಬುಚ್ಚುಪಲ್ಲಿ ವಿನೀತ್ ಕುಮಾರ್ ಹಾಗೂ ಶಿವಕುಮಾರ್ ರೆಡ್ಡಿ ಎಂಬುವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಐದು ಮೊಬೈಲ್ ಫೋನ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಕೃತ್ಯದಲ್ಲಿ ಮತ್ತೋರ್ವ ಆರೋಪಿ ಪರಾರಿಯಾಗಿದ್ದು ಆತನ ಬಂಧನಕ್ಕೆ ಶೋಧಕಾರ್ಯ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಮಾರ್ಚ್ 20 ರಂದು ದೂರುದಾರರಿಗೆ ಕರೆ ಮಾಡಿದ ಆರೋಪಿ ನಾಗೇಶ್ವರ್, ತನ್ನ ಹೆಸರು ಅಶೋಕ್ ರಾವ್, ಲೋಕಾಯುಕ್ತ ಅಧಿಕಾರಿಯಾಗಿದ್ದು ನಿಮ್ಮ ಮನೆ ಮೇಲೆ ದಾಳಿ ಮಾಡುತ್ತೇವೆ. ಇದನ್ನು ತಡೆಯಬೇಕಾದರೆ ಎರಡು ಲಕ್ಷ ಹಣ ನೀಡಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಎಡಿಜಿಪಿಗೆ ವರದಿ ನೀಡುವುದಾಗಿ ಬೆದರಿಸಿದ್ದನಂತೆ.
ಇದಕ್ಕೆ ಹೆದರಿದ ಆಶಾ ಸುರೇಶ್, ಮಾತುಕತೆ ನಡೆಸಿ ಬ್ಯಾಂಕ್ ಮೂಲಕ 1 ಲಕ್ಷ ಹಣ ನೀಡಿದ್ದರು. ಹಣ ಜಮೆಯಾಗುತ್ತಿದ್ದಂತೆ ಆರೋಪಿ ಫೋನ್ ಸ್ವಿಚ್ಆಫ್ ಮಾಡಿಕೊಂಡಿದ್ದ. ಅನುಮಾನಗೊಂಡು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಹನುಮಂತ ಕೆ. ಭಜಂತ್ರಿ ನೇತೃತ್ವದ ತಂಡ ಸತತ ಕಾರ್ಯಾಚರಣೆ ನಡೆಸಿ ಹೈದರಾಬಾದ್ಗೆ ಎಸ್ಕೇಪ್ ಆಗುವಾಗ ಬೆಂಗಳೂರು ನಗರ ರೈಲು ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ.
ಕೇಂದ್ರ ಸರ್ಕಾರಿ ನೌಕರನಾಗಿದ್ದ ಬಂಧಿತ ಆರೋಪಿಗಳ ಪೈಕಿ ನಾಗೇಶ್ವರ್ ರೆಡ್ಡಿ, ಕಡಪ ಕಾಲೋಜದರಲ್ಲಿ ಮೈನಿಂಗ್ ಡಿಪ್ಲೋಮಾ ವ್ಯಾಸಂಗ ಮಾಡಿದ್ದ. 2007ರಲ್ಲಿ ಭಾರತೀಯ ರೈಲ್ವೇಯಲ್ಲಿ ಸೆಕ್ಷನ್ ಇಂಜಿನಿಯರ್ ಆಗಿದ್ದ. ಎರಡು ವರ್ಷದ ಬಳಿಕ ಕೆಲಸ ತೊರೆದು ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾದಲ್ಲಿ ಕೆಲಸಕ್ಕೆ ಸೇರಿದ್ದ. ಕಡಿಮೆ ಸಮಯದಲ್ಲಿ ಹೆಚ್ಚು ಹಣ ಸಂಪಾದನೆ ಮಾಡುವ ಉದ್ದೇಶದಿಂದ ಸರ್ಕಾರಿ ಹುದ್ದೆಯನ್ನು ತ್ಯಜಿಸಿದ್ದ. ಸಹಚರರೊಂದಿಗೆ ಕೈಜೋಡಿಸಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. 2010ರಲ್ಲಿ ತನ್ನ ಸಹಚರರನ್ನು ಒಗ್ಗೂಡಿಸಿಕೊಂಡು ಟ್ರಾವೆಲ್ಸ್ ಟಿಕೆಟ್ ಬುಕ್ಕಿಂಗ್ ಬಗ್ಗೆ ಹಣ ವಂಚನೆ ಸಂಬಂಧ ಅನಂತಪುರ ಜಿಲ್ಲೆಯ ಒಂದು ಟೌನ್ ಪೊಲೀಸ್ ಠಾಣೆಯಲ್ಲಿ 9 ಪ್ರಕರಣ ದಾಖಲಾಗಿತ್ತು.
2013ರಲ್ಲಿ ಹಣ ಡ್ರಾ ಮಾಡಿಕೊಳ್ಳುವಾಗ ಅವರ ಎಟಿಎಂ ಪಿನ್ ಕೋಡ್ ನಂಬರ್ ಗ್ರಾಹಕರಿಗೆ ತಿಳಿಯದಂತೆ ಪಡೆದು ಹಣ ವಿತ್ ಡ್ರಾ ಮಾಡಿಕೊಳ್ಳುತ್ತಿದ್ದರು. ಈ ಬಗ್ಗೆ ಹೈದರಾಬಾದ್ ಸಿಐಡಿಯಲ್ಲಿ ಆರೋಪಿಗಳ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದವು ಎಂದು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಮಾಹಿತಿ ನೀಡಿದ್ದಾರೆ.
ಏಳು ಭಾಷೆಗಳನ್ನು ಕರಗತ ಮಾಡಿಕೊಂಡಿದ್ದ ಆರೋಪಿ ನಾಗೇಶ್ವರ್ ರೆಡ್ಡಿ ಅಕ್ಷರವಂತ ಹಾಗೂ ಕೇಂದ್ರ ಸರ್ಕಾರಿ ನೌಕರನಾಗಿದ್ದರ ಪರಿಣಾಮ ಇಂಗ್ಲಿಷ್, ಹಿಂದಿ, ತೆಲುಗು ಸೇರಿ ಸುಮಾರು ಏಳು ಭಾಷೆಗಳನ್ನು ಸುಲಲಿತವಾಗಿ ಮಾತನಾಡುವುದನ್ನು ಸಿದ್ಧಿಸಿಕೊಂಡಿದ್ದ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರನ್ನು ಗುರಿಯಾಗಿಸಿಕೊಂಡಿದ್ದ. ಅವರ ಹೆಸರು ಹಾಗೂ ಮೊಬೈಲ್ ನಂಬರ್ ಪಡೆಯಲು ಸರ್ಕಾರಿ ವೆಬ್ಸೈಟ್ ಗೆ ಹೋಗಿ ಅವರ ವಿವರಗಳನ್ನು ಪಡೆದು ಲೋಕಾಯುಕ್ತ, ಸಿಸಿಬಿ ಸೇರಿದಂತೆ ತನಿಖಾ ಸಂಸ್ಥೆಗಳ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಪರಿಚಯಿಸಿಕೊಂಡು ವಂಚನೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಉತ್ತರ ಪ್ರದೇಶದ ವಿವಿಧೆಡೆ ಕಳ್ಳತನ: ಕರ್ನಾಟಕದ ಐವರು ಆರೋಪಿಗಳ ಬಂಧನ