ಬೆಂಗಳೂರು: ಸಮಾಜದಲ್ಲಿ ಅದೆಷ್ಟೋ ದಂಪತಿ ತಮಗೆ ಸಂತಾನವಾಗಿಲ್ಲ ಅಂತ ಮಗುವನ್ನ ದತ್ತು ಪಡೆಯುತ್ತಾರೆ. ಇನ್ನೂ ಕೆಲವರು ಅನಾಥ ಮಕ್ಕಳ ಒಳಿತಿಗಾಗಿ ಮಾನವೀಯತೆ ದೃಷ್ಟಿಯಿಂದ ಮಕ್ಕಳನ್ನು ದತ್ತು ಪಡೆಯುತ್ತಾರೆ. ಆದ್ರೆ ಮಗುವನ್ನು ದತ್ತು ಪಡೆಯೋ ಕುಟುಂಬದವರು ಎಚ್ಚರವಾಗಿರಬೇಕು. ಯಾಕಂದ್ರೆ ಮಕ್ಕಳನ್ನು ದತ್ತು ಕೊಡುವ ನೆಪದಲ್ಲಿ ಹಣ ಸುಲಿಗೆ ಯತ್ನ ನಡೆಯುತ್ತಿದೆ.
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಇಂತಹದ್ದೇ ಒಂದು ಹಣ ಸುಲಿಗೆ ಮಾಡಿರುವ ಘಟನೆ ನಡೆದಿದೆ. ಲತಾ ಎನ್ನುವವರು ತನಗೆ ಕ್ಯಾನ್ಸರ್ ಇದೆ, ಹಾಗಾಗಿ ಮಗನನ್ನು ಸಾಕಲಾಗದೆ ದತ್ತು ನೀಡುವುದಾಗಿ ಹೇಳಿ, ತನ್ನ 9 ವರ್ಷದ ಮಗನನ್ನು ದತ್ತು ನೀಡಲು ಮುಂದಾಗಿದ್ದರು. ಕಸ್ತೂರಿ ಎನ್ನುವವರಿಗೆ ತನ್ನ ಮಗನನ್ನು ದತ್ತು ನೀಡಲು ಲತಾ ಮುಂದಾಗಿದ್ದರು ಎನ್ನಲಾಗ್ತಿದೆ.
ಅದೇ ರೀತಿ ಮಗನನ್ನು ಕಸ್ತೂರಿ ಮನೆಯಲ್ಲಿ ಬಿಟ್ಟು ಹೋಗಿದ್ದರು. ನಾಲ್ಕು ತಿಂಗಳ ಬಳಿಕ ದತ್ತು ಸ್ವೀಕಾರ ಪ್ರಕ್ರಿಯೆ ಮುಗಿಸುವುದಾಗಿ ಲತಾ ತಿಳಿಸಿದ್ದರು. ಇನ್ನೊಂದೆಡೆ ಮಗುವನ್ನು ತನ್ನ ಸ್ವಂತ ಮಗನಂತೆ ದತ್ತು ಪಡೆದ ಕಸ್ತೂರಿ ನೋಡಿಕೊಂಡಿದ್ದರು. ಮೂರು ತಿಂಗಳ ಬಳಿಕ ಇದ್ದಕ್ಕಿದ್ದಂತೆ 9 ವರ್ಷದ ಬಾಲಕ ಕಣ್ಮರೆಯಾಗಿದ್ದು, ಮನೆಯಲ್ಲಿದ್ದ ತನ್ನ ದಾಖಲಾತಿ ಸಮೇತ ಬಾಲಕ ಪರಾರಿಯಾಗಿದ್ದ. ಬಾಲಕನನ್ನು ಎಷ್ಟು ಹುಡುಕಿದ್ರೂ ಎಲ್ಲೂ ಸಿಗದ ಹಿನ್ನೆಲೆ ಕಸ್ತೂರಿ ದೂರು ನೀಡಿದ್ದರು. ಜೊತೆಗೆ ಬಾಲಕ ಕಾಣೆಯಾದ ವಿಚಾರನ್ನು ತಾಯಿ ಲತಾಗೂ ಸಹ ತಿಳಿಸಿದ್ದರು.