ಬೆಂಗಳೂರು: ಭೌಗೋಳಿಕ ಸಂಘರ್ಷಮಯ ವಾತಾವರಣದ ನಡುವೆಯೂ ಆಹಾರ, ರಸಗೊಬ್ಬರ, ವೈದ್ಯಕೀಯ ಉತ್ಪನ್ನಗಳ ಸರಬರಾಜನ್ನು ರಾಜಕೀಯಮುಕ್ತಗೊಳಿಸಲು ಪ್ರಯತ್ನಿಸಬೇಕೆಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ್ದಾರೆ. ಭಾರತವು ಜಿ20 ಕೂಟದ ಅಧ್ಯಕ್ಷತೆ ವಹಿಸಿಕೊಂಡ ಸಂದರ್ಭದಲ್ಲಿ ಅನುಸರಿಸಬೇಕಾದ ಕಾರ್ಯಚಟುವಟಿಕೆಗಳ ಕುರಿತು ಸಮಾಲೋಚನೆ ನಡೆಸಲು ನಿನ್ನೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಕರೆಯಲಾಗಿದ್ದ ಸರ್ವಪಕ್ಷಗಳ ಸಭೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಪಾಲ್ಗೊಂಡಿದ್ದು, ಕೆಲವು ಸಲಹೆಗಳನ್ನು ನೀಡಿದರು. ಆ ಸಲಹೆಗಳ ಅಂಶಗಳನ್ನು ಅವರು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
ಜಿ20 ಶೃಂಗದ ಅಧ್ಯಕ್ಷತೆಗಾಗಿ ಪ್ರಧಾನಿ ಅವರನ್ನು ಅಭಿನಂದಿಸಿರುವ ಗೌಡರು, ನಮ್ಮ ದೇಶಕ್ಕೆ ಸಿಕ್ಕಿರುವ ಈ ಅವಕಾಶ ಗಮನಾರ್ಹವಾದದ್ದು. ವಿಶ್ವದ ಆರ್ಥಿಕತೆ, ತಾಂತ್ರಿಕತೆ, ತಂತ್ರಜ್ಞಾನ, ವಿಜ್ಞಾನ, ಸಾಮಾಜಿಕ ಮತ್ತು ಪರಿಸರ ವೇದಿಕೆಗಳಲ್ಲಿ ನಮ್ಮ ಕೊಡುಗೆಗಳು ಅಪಾರವಾಗಿವೆ ಎಂದರು.
ಸೌಹಾರ್ದತೆಯ ಕಾರ್ಯಸೂಚಿ ಪ್ರಸ್ತುತಪಡಿಸಿ: ನಮ್ಮದು ಯುವ ಭಾರತ. ಈ ಅಧ್ಯಕ್ಷೀಯ ಅವಧಿಯು ಕ್ರಿಯಾತ್ಮಕ ಮತ್ತು ಶಕ್ತಿಯ ಏಕೀಕೃತ ಅರಿವಿಗೆ ಅವಕಾಶ ಮಾಡಿಕೊಡಲಿದೆ ಎಂಬ ವಿಶ್ವಾಸವಿದೆ. ಜಗತ್ತಿಗೆ ಪ್ರಧಾನಿ ಅವರು ಸೌಹಾರ್ದತೆಯ ಕಾರ್ಯಸೂಚಿಯನ್ನು ಪ್ರಸ್ತುತಪಡಿಸಬೇಕು. ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಜಗತ್ತಿನ ಸಮೀಪಕ್ಕೆ ಕೊಂಡೊಯ್ಯುವ ಮಾತುಗಳನ್ನಾಡಬೇಕು. ಪರಸ್ಪರ ದೇಶಗಳನ್ನು ಮತ್ತಷ್ಟು ಸಹಕಾರ ಮತ್ತು ಹತ್ತಿರವಾಗಿಸುವ ಕ್ರಮಗಳು ಸ್ವಾಗತಾರ್ಹ.