ಬೆಂಗಳೂರು: ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿರುವ ಜೆಡಿಎಸ್, ಉಪ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪದಾಧಿಕಾರಿಗಳ ಪುನರ್ ನೇಮಕ ಮಾಡಲು ಉದ್ದೇಶಿಸಿದೆ. ಕಳೆದ ಎರಡು ತಿಂಗಳಿಂದ 16 ಜಿಲ್ಲೆಗಳ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಹಾಗೂ ಮುಖಂಡರ ಸಭೆ ನಡೆಸಿ ಪಕ್ಷ ಸಂಘಟನೆ ಹಾಗೂ ಪದಾಧಿಕಾರಿಗಳ ಮರುನೇಮಕ ಕುರಿತಂತೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮಾಹಿತಿ ಪಡೆದುಕೊಂಡಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ 13 ಜಿಲ್ಲೆಗಳ ಸಭೆ ನಡೆಸಿ ಮಾಹಿತಿ ಪಡೆಯಲಾಗಿತ್ತು. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ ಮುಖಂಡರ ಸಭೆ ನಡೆಸಿ ಪಕ್ಷ ಸಂಘಟನೆ ಕುರಿತಂತೆ ಮಾಹಿತಿ ಪಡೆಯಲಾಗಿದೆ. ಪಿತೃಪಕ್ಷ ಮುಗಿದ ನಂತರ ಪದಾಧಿಕಾರಿಗಳ ಮರುನೇಮಕ ಮಾಡುವ ಬಗ್ಗೆ ದೇವೇಗೌಡರು ಈ ಹಿಂದೆ ಮಾಹಿತಿ ನೀಡಿದ್ದರು. ಹಾಗಾಗಿ, ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದ ಪದಾಧಿಕಾರಿಗಳನ್ನು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಕೆಲವು ಜಿಲ್ಲೆ ಹಾಗೂ ತಾಲೂಕುಗಳ ಪದಾಧಿಕಾರಿಗಳನ್ನು ಮುಂದುವರೆಸಲಾಗುತ್ತದೆ. ಈ ವಾರದಲ್ಲಿ ಪದಾಧಿಕಾರಿಗಳು ಬದಲಾವಣೆಗೆ ವರಿಷ್ಠರು ಚಾಲನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.