ಬೆಂಗಳೂರು: ನೈಸ್ ವಿರುದ್ಧ ದೊಡ್ಡಗೌಡರು ಮತ್ತೆ ತೊಡೆ ತಟ್ಟಿ ನಿಲ್ಲಲು ಮುಂದಾಗಿದ್ದಾರೆ. ಮತ್ತೊಮ್ಮೆ ನೈಸ್ ಅಕ್ರಮಗಳ ವಿರುದ್ಧ ಹೋರಾಟ ನಡೆಸಲು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ವೇದಿಕೆ ಸಜ್ಜುಗೊಳಿಸುತ್ತಿದ್ದಾರೆ. ಇಂದು ನೈಸ್ ವಿರುದ್ಧ ಮಾಧ್ಯಮಗೋಷ್ಟಿ ನಡೆಸುವ ಮೂಲಕ ದೇವೇಗೌಡರು ನೈಸ್ ಅಕ್ರಮಗಳ ವಿರುದ್ಧ ಮತ್ತೆ ತೊಡೆ ತಟ್ಟಿ ನಿಲ್ಲುವ ಬಗ್ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ನೈಸ್(ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸ್) ಮತ್ತೆ ಮುನ್ನಲೆಗೆ ಬಂದಿದೆ. ಜೆಡಿಎಸ್ ವರಿಷ್ಠ ದೇವೇಗೌಡರು ದೀರ್ಘಾವಧಿಯ ಬಳಿಕ ನೈಸ್ ವಿರುದ್ಧ ಮಾಧ್ಯಮಗೋಷ್ಟಿ ನಡೆಸುವ ಮೂಲಕ ಮತ್ತೆ ನೈಸ್ ಸಂಸ್ಥೆ ವಿರುದ್ಧ ಹೋರಾಟ ನಡೆಸುವ ಮುನ್ಸೂಚನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ನೈಸ್ ರಸ್ತೆಗೆ ಭೂಮಿ ಕಳೆದುಕೊಂಡ ರೈತರು ನನ್ನ ಬಳಿ ಬಂದು ನೋವು ತೋಡಿಕೊಂಡಿದ್ದಾರೆ. ಇದು ಪ್ರಾರಂಭ. ಮುಂದೆ ಇನ್ನು ಹೋರಾಟ ಇದೆ ಎಂದಿದ್ದಾರೆ.
ದೊಡ್ಡಗೌಡರ ನೈಸ್ ಹೋರಾಟದ ಹಾದಿ:13 ವರ್ಷಗಳ ಕಾಲ ದೊಡ್ಡಗೌಡರು ನೈಸ್ ಸಂಸ್ಥೆಯ ವಿರುದ್ಧ ಹೋರಾಟ ನಡೆಸಿದ್ದರು. ರಾಜಕೀಯವಾಗಿ, ಕಾನೂನಾತ್ಮಕವಾಗಿ 13 ವರ್ಷಗಳ ಕಾಲ ನಿರಂತರ ನೈಸ್ ಅಕ್ರಮ ವಿರುದ್ಧ ಹೋರಾಟದ ಹಾದಿ ಹಿಡಿದಿದ್ದರು. 2010ರಿಂದ ದೊಡ್ಡಗೌಡರು ನೈಸ್ ಹೋರಾಟವನ್ನು ತೀವ್ರಗೊಳಿಸಿದ್ದರು. ಅಂದು ಬೆಂಗಳೂರು ರೈಲ್ವೆ ನಿಲ್ದಾಣದಿಂದ ನೈಸ್ ಯೋಜನೆಗೆ ಭೂಮಿ ಕಳೆದುಕೊಂಡ ಸುಮಾರು 1,500 ರೈತರೊಂದಿಗೆ ದಿಲ್ಲಿ ಚಲೋ ನಡೆಸಿ ರಾಜ್ಯ ರಾಜಧಾನಿಯಲ್ಲಿ ನೈಸ್ ವಿರುದ್ಧ ಹೋರಾಟದ ಕಹಳೆ ಊದಿದ್ದರು.
2013ರಲ್ಲಿ ರೈತರ ಜೊತೆಗೂಡಿ ನೈಸ್ ಯೋಜನೆಗೆ ಭೂಮಿ ಕಳೆದುಕೊಂಡ ಸುತ್ತಮುತ್ತಲಿನ ಗ್ರಾಮಗಳಲ್ಲಿ ಧರಣಿ ನಡೆಸಿದ್ದರು. 2013ರಲ್ಲಿ ದೇವೇಗೌಡರು ಧರಣಿ ನಡೆಸಿ ನೈಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ನೈಸ್ ಸಂಸ್ಥೆಯಿಂದ ಭೂ ಪರಿಹಾರ ನೀಡದೇ ಇರುವುದು, ಅಕ್ರಮವಾಗಿ ಭೂ ಒತ್ತುವರಿ, ಟೌನ್ ಶಿಪ್ ನಿರ್ಮಾಣ, ಟೋಲ್ ಕಲೆಕ್ಷನ್ ವಿರುದ್ಧ ದೇವೇಗೌಡರು ಹೋರಾಟದ ಕಿಚ್ಚು ಹಚ್ಚಿದ್ದರು.