ಕರ್ನಾಟಕ

karnataka

ETV Bharat / state

ಐಟಿ ದಾಳಿ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದೇನು? - IT raid

ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮೇಲಿನ ಐಟಿ ದಾಳಿ ಹಿಂದೆ ಮೈತ್ರಿ ಸರ್ಕಾರದಲ್ಲಿ ಇವರು ಸಿಎಂ ಜೊತೆ ಹೆಚ್ಚು ಸಂಪರ್ಕ ಇರಿಸಿಕೊಂಡಿದ್ದೂ ಕಾರಣ ಇರಬಹುದು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ

ಮಾಜಿ ಪ್ರಧಾನಿ ದೇವೇಗೌಡ

By

Published : Oct 13, 2019, 6:00 PM IST

ಬೆಂಗಳೂರು:ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮೇಲಿನ ಐಟಿ ದಾಳಿ ಹಿಂದೆ ಮೈತ್ರಿ ಸರ್ಕಾರದಲ್ಲಿ ಇವರು ಸಿಎಂ ಜೊತೆ ಹೆಚ್ಚು ಸಂಪರ್ಕ ಇರಿಸಿಕೊಂಡಿದ್ದೂ ಕಾರಣ ಇರಬಹುದು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.

ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈಗ ನಾನು ಹೇಳಿರುವುದು ಕೂಡ ಕಾರಣ ಇರಬಹುದು. ಇದರ ಹಿನ್ನೆಲೆ ಏನಿದೆ ಎನ್ನುವುದು ನನಗೂ ಗೊತ್ತಿಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಇವರಿಬ್ಬರು ಉತ್ತಮ ಸಹಕಾರ ನೀಡಿದ್ದು, ಇವರ ಮೇಲೆ ದಾಳಿ ನಡೆಸಲು ಕಾರಣವಿರಬಹುದು ಅನ್ನಿಸುತ್ತದೆ. ಪರಮೇಶ್ವರ್ ಮೇಲಿನ ಐಟಿ ದಾಳಿಯ ಹಿಂದೆ ಯಾವ ಕೈವಾಡ ಇದೆ ಎಂದು ಸ್ಪಷ್ಟವಾಗಿ ಹೇಳುವುದು ನನ್ನಿಂದಲೂ ಅಸಾಧ್ಯ ಎಂದರು.

ಪರಮೇಶ್ವರ್ ಮನೆ ಹಾಗೂ ಸಂಸ್ಥೆಗಳ ಮೇಲೆ ಐಟಿ ದಾಳಿ ವಿಚಾರವಾಗಿ ಮಾತನಾಡಿದ ಅವರು, ಈ ದೇಶದಲ್ಲಿ 300 ಮೆಡಿಕಲ್ ಕಾಲೇಜುಗಳಿವೆ. 100ಕ್ಕೆ 80ರಷ್ಟು ಮೆಡಿಕಲ್ ಕಾಲೇಜಗಳನ್ನು ಸರ್ಕಾರದ ನಿಯಮಾವಳಿ ಪ್ರಕಾರ ನಡೆಸಲು ಅಸಾಧ್ಯ. ನಿಯಮಾವಳಿ ಪ್ರಕಾರವೇ ಹೋದರೆ ಕಾಲೇಜನ್ನೇ ಮುಚ್ಚಬೇಕಾಗುತ್ತದೆ. ಎಲ್ಲಾ ಕಡೆಯೂ ಒಂದಲ್ಲ ಒಂದು ರೀತಿ ಇಂತಹ ತಪ್ಪುಗಳನ್ನು ಮಾಡಿಕೊಂಡಿದ್ದಾರೆ ಎಂದರು.

ಈಗ ಪರಮೇಶ್ವರ್ ಅವರ ಅಣ್ಣ ತೀರಿ ಹೋಗಿದ್ದಾರೆ. ಅದರ ಒಂದು ಹೊಡೆತ ಕೂಡ ಅವರ ಮೇಲಿದೆ. ಈ ಕಾರಣದಿಂದಾಗಿ ಕಾಲೇಜಿನತ್ತ ಅವರಿಗೆ ಹೆಚ್ಚು ಗಮನಹರಿಸಲು ಆಗದೆ ಹೋಗಿರಬಹುದು. ತಪ್ಪುಗಳು ಆಗಿರಬಹುದು. ಸದ್ಯ ಪರಮೇಶ್ವರ್ ಮೆಡಿಕಲ್ ಕಾಲೇಜು ನಡೆಸುತ್ತಿದ್ದಾರೆ ಎಂದರು.

ಮಾಜಿ ಪ್ರಧಾನಿ ಹೆಚ್​​.ಡಿ.ದೇವೇಗೌಡ

ಸಿಎಂಗೆ ಪತ್ರ ಬರೆಯುತ್ತೇನೆ:

ಸರ್ಕಾರಿ ಕಾರ್ಯಕ್ರಮ ಸಂದರ್ಭ ಮಾಧ್ಯಮಗಳನ್ನು ರಾಜ್ಯ ಸರ್ಕಾರ ವಿಧಾನಸೌಧದಿಂದ ದೂರವಿಟ್ಟಿರುವುದನ್ನು ಖಂಡಿಸಿ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆಯುತ್ತೇನೆ. ಇಂದು ವಿಧಾನಸೌಧದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಮಾಧ್ಯಮ ಪ್ರವೇಶ ನಿರ್ಬಂಧಿಸಲಾಗಿದೆ. ಕಳೆದ ಗುರುವಾರದಿಂದ ಮೂರು ದಿನ ನಡೆದ ವಿಧಾನಸಭೆ ಅಧಿವೇಶನಕ್ಕೂ ಕೂಡ ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ ಹೇರಲಾಗಿತ್ತು. ಸರ್ಕಾರ ಈ ರೀತಿ ನಿಯಂತ್ರಣ ಹೇರುವುದು ಸರಿಯಲ್ಲ. ವಾಕ್ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ ಹಾಗೂ ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡುವ ಅಧಿಕಾರ ಯಾರಿಗೂ ಇಲ್ಲ. ಸರ್ಕಾರಿ ಸಮಾರಂಭಕ್ಕೆ ಮಾಧ್ಯಮ ಪ್ರವೇಶ ಇಲ್ಲ ಎಂದರೆ ಅದಕ್ಕೆ ಅರ್ಥವೇ ಇಲ್ಲ. ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳು ಇನ್ನೊಮ್ಮೆ ಧರಣಿ ಕುಳಿತರೆ ನಿಮ್ಮೊಂದಿಗೆ ನಾನು ಕೂರಲು ಸಿದ್ಧ ಎಂದರು.

ಸ್ಪೀಕರ್ ಒಬ್ಬರ ವಿವೇಚನೆ ಅಲ್ಲ:

ಮೂರು ದಿನ ನಡೆದ ವಿಧಾನಸಭೆ ಅಧಿವೇಶನದಲ್ಲಿ ಮಾಧ್ಯಮಗಳ ಪ್ರವೇಶ ನಿರ್ಬಂಧದ ಹಿಂದೆ ಕೇವಲ ಸ್ಪೀಕರ್ ಒಬ್ಬರ ನಿರ್ಧಾರ ಇಲ್ಲವೇ ವಿವೇಚನೆ ಇದೆ ಎನ್ನುವುದನ್ನು ನಾನು ಒಪ್ಪಲ್ಲ. ಸ್ಪೀಕರ್ ಒಬ್ಬರೇ ನಿರ್ಧಾರ ತೆಗೆದುಕೊಂಡು ಮುಂದುವರೆಯಲು ಸಾಧ್ಯವಿಲ್ಲ. ಇದರಲ್ಲಿ ಪಕ್ಷದ ನಿರ್ಧಾರವು ಇರುತ್ತದೆ. ನನ್ನ ಅನುಭವದ ಆಧಾರದಲ್ಲಿ ಹೇಳುವುದಾದರೆ ಈ ನಿರ್ಧಾರದ ಹಿಂದೆ ಕೇವಲ ಸ್ಪೀಕರ್ ಒಬ್ಬರೇ ಇಲ್ಲ. ಅಲ್ಲದೆ ಇಂದು ಮಾಧ್ಯಮದವರಿಗೆ ಪ್ರವೇಶ ನಿಯಂತ್ರಿಸುವುದರ ಹಿಂದೆ ಸ್ಪೀಕರ್ ಕೈ ಇರಲಿಕ್ಕೆ ಸಾಧ್ಯವೇ ಇಲ್ಲ. ಇಂದು ಯಾಕೆ ಮಾಧ್ಯಮದವರನ್ನು ನಿಯಂತ್ರಿಸಿದರು? ಇಂದು ನಡೆದದ್ದು ರಾಜಕೀಯ ಸಮಾವೇಶ ಅಲ್ಲ. ಇದು ವಾಲ್ಮೀಕಿ ಜಯಂತಿ. ಇದರಿಂದ ನನಗೆ ಮಾಧ್ಯಮ ನಿಯಂತ್ರಣದ ಹಿಂದೆ ಬೇರೆಯವರ ಕೈವಾಡವೇ ಇರಬಹುದು ಎಂಬ ಗುಮಾನಿ ಇದೆ ಎಂದರು.

ABOUT THE AUTHOR

...view details