ಬೆಂಗಳೂರು:ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಝೆಡ್ ಶ್ರೇಣಿಯ ಭದ್ರತೆ ಒದಗಿಸಲಾಗಿದೆ. ಕಳೆದ ಗುರುವಾರ ಕೊಡಗು ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳ ವೀಕ್ಷಣೆಗೆ ತೆರಳಿದ್ದ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಅಲ್ಲದೇ ಅವರ ವಾಹನಕ್ಕೆ ಮುತ್ತಿಗೆ ಹಾಕಿ ಧಿಕ್ಕಾರ ಸಹ ಕೂಗಲಾಗಿತ್ತು. ಹೀಗಾಗಿ ಅವರಿಗೆ ಝೆಡ್ ಶ್ರೇಣಿಯ ಭದ್ರತೆ ನೀಡಲಾಗಿದೆ.
ಈ ಘಟನೆ ನಡೆದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಸಿದ್ದರಾಮಯ್ಯಗೆ ಝೆಡ್ ಶ್ರೇಣಿಯ ಭದ್ರತೆ ಒದಗಿಸುವ ಭರವಸೆ ನೀಡಿದ್ದರು. ಆರಂಭದ ಒಂದೆರಡು ದಿನ ಈ ಸವಲತ್ತನ್ನು ಒದಗಿಸಿರಲಿಲ್ಲ. ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭ ಭದ್ರತೆ ಒದಗಿಸಲಾಗಿತ್ತು. ಸಿದ್ದರಾಮಯ್ಯ ಭದ್ರತೆ ವಿಚಾರವಾಗಿ ಟೀಕೆಗಳು ಕೇಳಿ ಬಂದ ಹಿನ್ನೆಲೆ ಇದೀಗ ಮಾಜಿ ಸಿಎಂಗಳಿಗೆ ಝೆಡ್ ಶ್ರೇಣಿಯ ಭದ್ರತೆ ಒದಗಿಸಲು ಸರ್ಕಾರ ತೀರ್ಮಾನಿಸಿ, ಈ ಸಂಬಂಧ ಆದೇಶ ಹೊರಡಿಸಿದೆ.