ಬೆಂಗಳೂರು: ಪರ್ಸೆಂಟೇಜ್ ಯಾಕೆ ಕೊಡುತ್ತಿರಾ?. ಕಮಿಷನ್ ಕೇಳಿದರೆ ಕೆಲಸ ಮಾಡುವುದಿಲ್ಲವೆಂದು ಒಂದು ವರ್ಷ ಕೆಲಸ ನಿಲ್ಲಿಸಿ, ಆಗ ತಂತಾನೆ ಎಲ್ಲವೂ ಸರಿಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಗುತ್ತಿಗೆದಾರರಿಗೆ ಮುಖ್ಯವಾದ ಸಲಹೆ ನೀಡಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, 40 ಪರ್ಸೆಂಟ್ ಕಮಿಷನ್ ಬಗ್ಗೆ ನಿನ್ನೆ ಕೆಲವು ಗುತ್ತಿಗೆದಾರರು ಆರೋಪ ಮಾಡಿದ್ದಾರೆ. ಯಾವುದಾದರೂ ಸಾಕ್ಷಿ ಇದ್ದರೆ ತನಿಖೆ ನಡೆಸುವುದಾಗಿ ಸರ್ಕಾರ ಹೇಳುತ್ತಿದೆ. ತನಿಖೆಗೆ ವಹಿಸಿದರೆ ಸಾಕ್ಷಿ ಕೊಡುತ್ತೇವೆಂದು ಗುತ್ತಿಗೆದಾರರು ಹೇಳುತ್ತಾರೆ. ನಾನು ಎರಡು ಬಾರಿ ಮುಖ್ಯಮಂತ್ರಿಯಾದಾಗಲೂ ಈ ಪರ್ಸೆಂಟೇಜ್ ಏನೂ ಇರಲಿಲ್ಲ. ನಾನು ಲಾಟರಿ ನಿಷೇಧ ಮಾಡಿದಾಗ, ಇದ್ದ ಕಿಂಗ್ ಪಿನ್, ಮಂತ್ರಿಗಳು ಎಷ್ಟೆಷ್ಟೋ ಆಫರ್ ಕೊಟ್ಟರು. ಆದರೂ ಎಲ್ಲ ಧಿಕ್ಕರಿಸಿ ಲಾಟರಿ ನಿಷೇಧ ಮಾಡಿದೆ ಎಂದರು.
ಮೈತ್ರಿ ಸರ್ಕಾರದಲ್ಲಿ ಕಮಿಷನ್ ಇತ್ತು: ಈ ವ್ಯವಸ್ಥೆ ಸ್ವಾತಂತ್ರ್ಯ ನಂತರದ ದಿನಗಳಿಂದ ನಡೆದುಕೊಂಡೇ ಬಂದಿದೆ. ನನ್ನ ಕಾಲದಲ್ಲಿ ನಾನಂತೂ ಇದಕ್ಕೆ ಅವಕಾಶ ಕೊಡಲಿಲ್ಲ. ಮೆಟ್ರೋ ಯೋಜನೆಯನ್ನು ಗುತ್ತಿಗೆದಾರರಿಗೆ ಕೊಟ್ಟಾಗ, ಯಾರು ಅಧಿಕಾರಿ ಅಂತಾ ಕೂಡಾ ನನಗೆ ಗೊತ್ತಿರಲಿಲ್ಲ. ಮೈತ್ರಿ ಸರ್ಕಾರದ ಅವಧಿಯಲ್ಲಿ ಕೂಡ ಕಮಿಷನ್ ವ್ಯವಹಾರ ನಡೆದಿದೆ. ಆದರೆ ನನ್ನ ಕಚೇರಿಯಲ್ಲಿ ನಡೆದಿಲ್ಲ ಎಂದು ಕುಮಾರಸ್ವಾಮಿ ಸಮರ್ಥನೆ ನೀಡಿದರು.
ನ್ಯಾಯ ಸಿಗುವುದಿಲ್ಲ:ಕೋಟ್ಯಾಂತರ ರೂಪಾಯಿ ಹಣ ಮಾಡಿರುವ ಅಧಿಕಾರಿಗಳ ಮನೆ ರೈಡ್ ಮಾಡಿಸಿದ್ರು. ಎಷ್ಟು ಜನರನ್ನು ಒಳಗೆ ಕಳುಹಿಸಿದ್ದೀರಿ?. ಎಷ್ಟು ಜನರಿಗೆ ನ್ಯಾಯ ಕೊಡಿಸಿದ್ದಾರೆ. ನ್ಯಾಯಾಂಗ ತನಿಖೆಯಲ್ಲಿ ಏನಾದರೂ ಸಿಕ್ಕಿತೇ?. ಕೆಂಪಣ್ಣ ಆಯೋಗ ಮಾಡಿದ ತನಿಖೆಯಲ್ಲಿ ಏನು ಸಿಕ್ತು. ಏನೇ ಸಾಕ್ಷಿ ಕೊಟ್ಟರೂ ಯಾವುದೇ ನ್ಯಾಯ ಸಿಗುವುದಿಲ್ಲ ಎಂದು ಹೆಚ್ಡಿಕೆ ಬೇಸರ ವ್ಯಕ್ತಪಡಿಸಿದರು.