ಬೆಂಗಳೂರು :ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ಅನಾರೋಗ್ಯದ ಕಾರಣ ಇಂದು ಬೆಳಗಿನ ಜಾವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್ಡಿಕೆಗೆ ತೀವ್ರ ಜ್ವರದ ಹಿನ್ನೆಲೆ ಅವರು ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ಇಂದು ಕಾರ್ಯಕ್ರಮ ನಿಗದಿಯಾಗಿತ್ತು. ಅನಾರೋಗ್ಯದ ಹಿನ್ನೆಲೆ ಹೆಚ್ಡಿಕೆ ಶ್ರೀನಿವಾಸಪುರ ಭೇಟಿ ರದ್ದಾಗಿದೆ ಎಂದು ತಿಳಿದು ಬಂದಿದೆ. ಪಕ್ಷ ಬಲವರ್ಧನೆಗೆ ಮುಂದಾಗಿರುವ ದಳಪತಿಗಳು, ಸೆಪ್ಟೆಂಬರ್ನಲ್ಲಿ ರಾಜ್ಯ ಪ್ರವಾಸ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್ ಬರ್ ಮೊದಲವಾರದಲ್ಲಿ ಕೋರ್ ಕಮಿಟಿ ಸಭೆ ನಡೆಸಿ ನಂತರ ಜಿಲ್ಲಾಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ಪಕ್ಷ ಸಂಘಟನೆಗೆ ನಿರ್ಧರಿಸಲಾಗಿದೆ.
ಮುಂದಿನ ಐದು ವರ್ಷ ನಿಖಿಲ್ ಚುನಾವಣೆಗೆ ಸ್ಪರ್ಧಿಸಲ್ಲ:ಕೆಲ ದಿನಗಳ ಹಿಂದೆ ಹೆಚ್ಡಿಕೆ ಮುಂದಿನ ಐದು ವರ್ಷ ನಿಖಿಲ್ ಕುಮಾರಸ್ವಾಮಿ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದ ಹೇಳಿದ್ದರು. ನಿಖಿಲ್‌ಗೆ ಸಲಹೆ ನೀಡಿದ್ದೇನೆ. ರಾಜಕೀಯ ಸಹವಾಸಕ್ಕೆ ಹೋಗಬೇಡ. ನಿನಗೆ ಭಗವಂತ ಕೊಟ್ಟಿರೋ ಕಲೆ ಇದೆ. ಸಿನಿಮಾ ಮಾಡು ಎಂದು ಹೇಳಿರುವುದಾಗಿ ನಿಖಿಲ್ ಚುನಾವಣೆ ಸ್ಪರ್ಧೆ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದರು.
ದೇವೇಗೌಡರು, ನಾನು ಎಲ್ಲರೂ ಸೋತಿದ್ದೇವೆ. ನಾನು ಒತ್ತಡಗಳ ಮೇಲೆ ಚುನಾವಣೆ ಮಾಡಲ್ಲ. ಸದ್ಯಕ್ಕೆ ನಿಖಿಲ್‌ಗೆ ರಾಜಕೀಯ ಬೇಡಾ ಅಂತಾ ಹೇಳಿದ್ದೇನೆ. ಮುಂದೆ ನೋಡೋಣ, ಅವನ ಹಣೆಯಲ್ಲಿ ಬರೆದಿದ್ರೆ ನಾನು ತಪ್ಪಿಸೋಕೆ ಆಗಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಿನ್ನ ಜೀವನ ರೂಪಿಸಿಕೋ ಎಂದು ಹೇಳಿರುವೆ. ಯಾವುದೇ ಕಾರಣಕ್ಕೂ ಮುಂದಿನ ಐದು ವರ್ಷ ಚುನಾವಣೆಗೆ ತರಲ್ಲ. ನಿಖಿಲ್ ಕುತಂತ್ರಕ್ಕೆ ಬಲಿಯಾಗಿದ್ದಾನೆ. ಇದೀಗ ಅದೇ ಜನ ಪಶ್ಚಾತ್ತಾಪ ಪಡುವಂತೆ ಆಗಿದೆ ಎಂದು ಹೆಚ್ಡಿಕೆ ಹೇಳಿದರು.
ಕಾವೇರಿ ನೀರಿನ ಬಗ್ಗೆ ಹೆಚ್ಡಿಕೆ ಹೇಳಿದ್ದು ಹೀಗೆ: ಕಾವೇರಿ ವಿಚಾರದಲ್ಲಿ ಸರ್ಕಾರ ಹುಡುಗಾಟಿಕೆ ಬಿಡಬೇಕು. ನಿಮ್ಮ ಗ್ಯಾರಂಟಿ ಜೊತೆಗೆ ರೈತರಿಗೆ 6ನೇ ಗ್ಯಾರಂಟಿ ಕೊಡಿ. ರೈತರಿಗೆ ಪರಿಹಾರ ಕೊಡ್ತೇವೆ ಅಂತ ಘೋಷಣೆ ಮಾಡಿ ಎಂದರು. ಬಳಿಕ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡಿಲ್ಲ. ವಾಟರ್ ಮ್ಯಾನೇಜ್‌ಮೆಂಟ್ ಬೋರ್ಡ್ನವರು ನೀರು ಬಿಡಿ ಅಂದ ತಕ್ಷಣ ಸರ್ಕಾರ ಬಿಡುಗಡೆ ಮಾಡಿದೆ. ಆಗಲೇ ಪ್ರತಿಭಟನೆ ಮಾಡಬೇಕಿತ್ತು. ತಮಿಳುನಾಡಿನವರು ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕಿದ್ದಾರೆ. ಅರ್ಜಿ ವಿರುದ್ಧ ಸುಪ್ರೀಂ ಕೋರ್ಟ್ ಮುಂದೆ ನಮ್ಮ ರಾಜ್ಯ ಸರ್ಕಾರ ಹೋಗಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟರು.
ಓದಿ:ಕಾವೇರಿ ನೀರಿನ ವಿಷಯದಲ್ಲಿ ಸರ್ಕಾರದಿಂದ ಲೋಪ: ಹೆಚ್.ಡಿ.ಕುಮಾರಸ್ವಾಮಿ