ಬೆಂಗಳೂರು: ರಾಜ್ಯದಲ್ಲಿ ವರ್ಗಾವಣೆ ದಂಧೆ ಶುರುವಾಗಿದ್ದು, ಪ್ರತಿ ಹುದ್ದೆಗೂ ರೇಟ್ ಫಿಕ್ಸ್ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದ್ದಾರೆ. ಪಕ್ಷದ ಕಚೇರಿ ಜೆ ಪಿ ಭವನದಲ್ಲಿ ಇಂದು ವಿವಿಧ ಜಿಲ್ಲೆಗಳ ಮುಖಂಡರ ಆತ್ಮಾವಲೋಕನ ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರವನ್ನು ಟೀಕೆ ಮಾಡುತ್ತಿದ್ದ ಇದೇ ಕಾಂಗ್ರೆಸ್ ನಾಯಕರು ಈಗ ಪ್ರತಿ ಹುದ್ದೆಗೆ ರೇಟ್ ಫಿಕ್ಸ್ ಮಾಡಿದ್ದಾರೆ. ಹಿಂದಿನ ಮುಖ್ಯಮಂತ್ರಿಗಳ ಬಗ್ಗೆ ಇವರೇ ಪೇಸಿಎಂ ಎಂದು ಪ್ರಚಾರ ಮಾಡಿದ್ದರು. ಆದರೆ, ಅದಕ್ಕಿಂತ ಜಾಸ್ತಿ ಈ ಸರ್ಕಾರದಲ್ಲಿ ನಡೆಯುತ್ತಿದೆ. ಇದನ್ನು ಎಷ್ಟು ಪರ್ಸೆಂಟ್ ಸರ್ಕಾರ ಎಂದು ಕರೆಯಬೇಕು? ಎಂದು ಪ್ರಶ್ನಿಸಿದರು.
ಪೇಸಿಎಂ ಪ್ರಚಾರ ನಡೆಸಿದ್ದ ಇವರ ಬಗ್ಗೆಯೂ ನಾವು ಹಾದಿಬೀದಿಯಲ್ಲಿ ಪ್ರಚಾರ ನಡೆಸಬೇಕಿದೆ. ಗೋಡೆಗಳ ಮೇಲೆ ಪೋಸ್ಟರ್ ಅಂಟಿಸಬೇಕಿದೆ. ಸ್ವತಃ ಅಧಿಕಾರಿಗಳಲ್ಲೇ ರೇಟ್ ಫಿಕ್ಸ್ ಆಗಿದೆ ಅಂತ ಮಾತಾಡ್ತಾ ಇದ್ದಾರೆ ಎಂದು ಅವರು ದೂರಿದರು. ಈಗ ಇವರು ಏನ್ ಮಾಡ್ತಾ ಇದ್ದಾರೆ ಎನ್ನುವುದನ್ನು ಜನ ಗಮನಿಸುತ್ತಿದ್ದಾರೆ. ಇದನ್ನು ಸಾಬೀತು ಮಾಡಿ ಅಂದರೆ ಹೇಗೆ ಮಾಡೋದು? ಹಿಂದೆ 40% ಆರೋಪವನ್ನು ಸಾಬೀತು ಮಾಡಿದ್ದರಾ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಈಗ ಅವರದೇ ಸರ್ಕಾರ ಬಂದಿದೆ, ಪರ್ಸೆಂಟೇಜ್ ಆರೋಪವನ್ನು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.
ಗ್ಯಾರಂಟಿಗಳ ಬಗ್ಗೆ ಸಚಿವರಿಗೇ ಗ್ಯಾರಂಟಿ ಇಲ್ಲ: ಗ್ಯಾರಂಟಿಗಳ ಬಗ್ಗೆ ಸ್ವತಃ ಸಚಿವರಿಗೆ ಮಾಹಿತಿ ಇದ್ದಂತೆ ಕಾಣುತ್ತಿಲ್ಲ. ಅವರೆಲ್ಲರೂ ಅರಬರೆ ಜ್ಞಾನದಿಂದ ಮಾತನಾಡುತ್ತಿದ್ದಾರೆ. ಅದು ಜನತೆಗೂ ಚೆನ್ನಾಗಿ ಅರ್ಥವಾಗುತ್ತಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.
ಮುಖ್ಯವಾಗಿ ಗೃಹಲಕ್ಷ್ಮಿ ಕಾರ್ಯಕ್ರಮದಲ್ಲಿ ಮತ್ತೊಂದು ಗೊಂದಲ ತಂದಿಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಹೆಚ್ಡಿಕೆ, ಅವರೊಬ್ಬ ಸಚಿವರಷ್ಟೇ ಅಲ್ಲ, ಬಹುತೇಕ ಎಲ್ಲ ಸಚಿವರಿಗೆ ಗ್ಯಾರಂಟಿಗಳ ಯಾವ ಗ್ಯಾರಂಟಿಯೂ ಇಲ್ಲ ಎಂದರು.
ಇದು ಒಂದು ಕಾರ್ಯಕ್ರಮದ ಗೊಂದಲ ಅಲ್ಲ, ಐದು ಕಾರ್ಯಕ್ರಮಗಳ ಗೊಂದಲ. ಯಾರಿಗೂ ಯಾವ ಸ್ಪಷ್ಟತೆಯೂ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಗ್ಯಾರಂಟಿಗಳು ಲೇವಡಿಯ ವಸ್ತುವಾಗಿವೆ. ಮಾಧ್ಯಮಗಳಲ್ಲಿ ಕೂಡ ಇವುಗಳ ಬಗ್ಗೆ ಸಾಕಷ್ಟು ನಕಾರಾತ್ಮಕ ವರದಿಗಳು ಬರುತ್ತಿವೆ ಎಂದು ಕುಮಾರಸ್ವಾಮಿ ಅವರು ಉಲ್ಲೇಖ ಮಾಡಿದರು.
ಗೃಹಜ್ಯೋತಿ ಯೋಜನೆಯ ಬಗ್ಗೆ ಹೇಳುವುದೇ ಬೇಡ ಎನಿಸುತ್ತದೆ. ಏಕೆಂದರೆ, ಇಂಧನ ಇಲಾಖೆಯನ್ನು ಮುನ್ನಡೆಸುತ್ತಿರುವ ಸಚಿವರಾದ ಜಾರ್ಜ್ ಅವರಿಗೆ ಈ ಕಾರ್ಯಕ್ರಮ ಅರ್ಥ ಆಗಿಲ್ಲ. ಅವರು ತಾಳಮೇಳ ಇಲ್ಲದ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇಲಾಖೆಯ ಬಗ್ಗೆ ಸಂಪೂರ್ಣ ಮಾಹಿತಿ ಅವರಿಗೆ ಇಲ್ಲ, ಯಾಕೆ ಅಧಿಕಾರಿಗಳು ಅವರಿಗೆ ಮಾಹಿತಿ ನೀಡುತ್ತಿಲ್ಲವೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಗೃಹಲಕ್ಷ್ಮಿ, ಗೃಹಜ್ಯೋತಿ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಅತೀವ ಕುತೂಹಲ, ನಿರೀಕ್ಷೆ ಹುಟ್ಟು ಹಾಕಲಾಗಿತ್ತು. ಕೊನೆಪಕ್ಷ ಆ ಇಲಾಖೆಗಳನ್ನು ಮುನ್ನಡೆಸುವ ಇಬ್ಬರೂ ಸಚಿವರಿಗೆ ಈ ಕಾರ್ಯಕ್ರಮಗಳ ಬಗ್ಗೆ ಖಾತರಿ, ಸ್ಪಷ್ಟತೆ ಇಲ್ಲ ಎನ್ನುವುದು ಅವರ ಹೇಳಿಕೆಗಳಿಂದ ಗೊತ್ತಾಗುತ್ತದೆ. ಚುನಾವಣೆ ಪೂರ್ವದಲ್ಲಿ ಏನು ಘೋಷಣೆ ಮಾಡಿದ್ದರು ಎನ್ನುವುದು ನನಗೆ ಮಾತ್ರವಲ್ಲ ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಈಗ ನೋಡಿದರೆ ಸರ್ಕಾರ ಸಬೂಬುಗಳ ಪಟ್ಟಿ ಮಾಡಿಕೊಂಡು ಕಾಲಹರಣ ಮಾಡುತ್ತಿದೆ. ಜನರ ನಂಬಿಕೆಯ ಹರಣ ಮಾಡುತ್ತಿದೆ ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.