ಬೆಂಗಳೂರು : ಸಮವಸ್ತ್ರ ವಿವಾದದಿಂದ ಶಿಕ್ಷಣ ಕ್ಷೇತ್ರದ ಮೇಲೆ ಆಗಿರುವ ಪರಿಣಾಮದ ಬಗ್ಗೆ ಚರ್ಚಿಸಲು ಅವಕಾಶ ಕೋರಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರು ನಿಲುವಳಿ ಸೂಚನೆ ಮಂಡಿಸಿದ ವೇಳೆ ಮಾತಿನ ವಾಗ್ವಾದ ನಡೆದ ಪ್ರಸಂಗ ವಿಧಾನಸಭೆಯಲ್ಲಿ ಸೋಮವಾರ ನಡೆಯಿತು.
ನಿಲುವಳಿ ಸೂಚನೆ ಮಂಡಿಸಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ವಿವಾದದಿಂದ ಸಮಸ್ಯೆ ಉಂಟಾಗಿದೆ. ಕೆಲವೆಡೆ ಅಹಿತಕರ ಘಟನೆಯೂ ನಡೆದು ಸಾಮರಸ್ಯಕ್ಕೆ ಭಂಗ ತಂದಿವೆ. ಕೋವಿಡ್ನಿಂದ ಎರಡು ವರ್ಷ ಶಾಲಾ-ಕಾಲೇಜುಗಳು ಸಾಕಷ್ಟು ಸಮಸ್ಯೆ ಎದುರಿಸಿದವು.
ರಾಷ್ಟ್ರಕವಿ ಕುವೆಂಪು ಅವರು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದಿದ್ದಾರೆ. ಆದರೆ, ಅವರ ತವರು ಜಿಲ್ಲೆ ಶಿವಮೊಗ್ಗದಲ್ಲೇ ಹಿಂಸಾಚಾರವಾಗಿದೆ. ಶಿಕ್ಷಣ ಕ್ಷೇತ್ರ, ಮಕ್ಕಳ ವಿದ್ಯಾಭ್ಯಾಸದ ಮೇಲೆ ಸಮಸ್ಯೆ ಉಂಟಾಗಿದೆ. ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರಿದೆ. ಇದು ಸಾಮರಸ್ಯ ಮೂಡಿಸುವ ವಿಚಾರವಾಗಿದೆ. ಚರ್ಚೆಗೆ ಅವಕಾಶ ಕೊಡಬೇಕೆಂದು ಮನವಿ ಮಾಡಿದರು.
ಮಾತಿನ ವಾಗ್ವಾದ: ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಜಮೀರ್ ಅಹ್ಮದ್ ಖಾನ್, ಕುಮಾರಸ್ವಾಮಿ ಅವರು ಹಿಜಾಬ್, ಗಿಜಾಬ್ ಏನೂ ಬೇಡ ಎನ್ನುತ್ತಿದ್ದರು. ಒಂದೂವರೆ ತಿಂಗಳ ನಂತರ ಈಗ ದಿಢೀರನೇ ಪ್ರಸ್ತಾಪ ಮಾಡುತ್ತಿದ್ದಾರೆ ಎಂದರು. ಆಗ ಜೆಡಿಎಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಜಮೀರ್ ಮತ್ತು ಜೆಡಿಎಸ್ ಶಾಸಕರ ನಡುವೆ ಮಾತಿನ ವಾಗ್ವಾದ ನಡೆಯಿತು.