ಬೆಂಗಳೂರು: ಕೆಇಆರ್‌ಸಿ ತನ್ನ ಸುಂಕದ ಆದೇಶದಲ್ಲಿ ಉದ್ಯಮ ವಲಯಕ್ಕೆ ವಿದ್ಯುತ್ ದರ ಹೆಚ್ಚಿಸಿದ್ದು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಹೆಚ್‌ಟಿ ಕೈಗಾರಿಕೆಗಳ ಮೇಲೆ ವಿಧಿಸುವ ಶೇ. 9ರಷ್ಟು ವಿದ್ಯುತ್ ತೆರಿಗೆಯನ್ನು ಶೇ.3 ರಷ್ಟು ಇಳಿಸಬೇಕು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ನಿಯೋಗ ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು. ಇದೇ ವೇಳೆ, ಇಂಧನ ಶುಲ್ಕದಲ್ಲಿ (Fuel Escalation charges) ರಿಯಾಯಿತಿ ನೀಡಲು ಹಾಗೂ ಇತರೆ ರಾಜ್ಯಗಳಲ್ಲಿ ಎಂಎಸ್ಂ.ಇ ನೀತಿ ಹಾಗೂ ಕಾಯ್ದೆ ಇರುವಂತೆ ರಾಜ್ಯದಲ್ಲಿಯೂ ಕಾಯ್ದೆ ರಚನೆ ಮಾಡುವಂತೆ ಒತ್ತಾಯಿಸಿದರು.
ನಿಯೋಗದ ಮನವಿಗೆ ಸ್ಪಂದಿಸಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಾಯ್ಯ, ಗೃಹಜ್ಯೋತಿ ಯೋಜನೆಯ ಹೊರೆಯನ್ನು ಯಾರ ಮೇಲೂ ಹಾಕುತ್ತಿಲ್ಲ. ಇದೊಂದು ತಪ್ಪು ಅಭಿಪ್ರಾಯ ಎಂದು ತಿಳಿಸಿದ್ದಾರೆ. ಅಲ್ಲದೇ, ನಮ್ಮ ಸರ್ಕಾರ ವಿದ್ಯುತ್ ಶುಲ್ಕವನ್ನು ಏರಿಸುವ ನಿರ್ಧಾರ ಮಾಡಿಲ್ಲ. ಕೆಇಆರ್‌ಸಿ ಬೆಲೆ ಹೆಚ್ಚಳದ ನಿರ್ಧಾರವನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ ಕೈಗೊಂಡಿತ್ತು ಎಂದಿದ್ದಾರೆ. ನಿಯೋಗ ಮಾಡಿರುವ ಮನವಿಯ ಕುರಿತು ಆರ್ಥಿಕ, ಇಂಧನ ಇಲಾಖೆ , ಕಾಸಿಯಾ, ಎಫ್‌ಕೆಸಿಸಿಐ ಅವರೊಂದಿಗೆ ಪ್ರತ್ಯೇಕ ಸಭೆ ಕರೆದು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇಂಧನ ಸಚಿವ ಕೆ.ಜೆ. ಜಾರ್ಜ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹ್ಮದ್, ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಎಫ್‌ಕೆಸಿಸಿಐ ಪದಾಧಿಕಾರಿಗಳಾದ ರಮೇಶ್ ಚಂದ್ರ ಲಾಹೋಟಿ, ಎಂ.ಜಿ. ಬಾಲಕೃಷ್ಣ , ಡಾ.ಪ್ರಸಾದ್, ಬಿ.ಟಿ. ಮನೋಹರ್ ಉಪಸ್ಥಿತರಿದ್ದರು.
ಸಿಎಂ ಭೇಟಿ ಬಳಿಕ ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ. ಗೋಪಾಲ ರೆಡ್ಡಿ ಮಾತನಾಡಿ, "ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದೇವೆ. ಇಂಧನ ಸಚಿವರೂ ಇದ್ದರು. ಇಂಧನ ದರ ಏರಿಕೆಯಿಂದ ಕೈಗಾರಿಕೆಗಳಿಗೆ ಹೊರೆ ಆಗ್ತಿದೆ. ವಿದ್ಯುತ್ ದರ ಏರಿಕೆಯಿಂದ ಡಬಲ್ ಬಿಲ್ ಬಂದಿದೆ. ಕೈಗಾರಿಕೆಗಳಿಗೆ ಬಹಳ ಹೊಡೆತ ಬಿದ್ದಿದೆ. ವಿದ್ಯುತ್ ಟ್ಯಾಕ್ಸ್ ಅನ್ನು 9% ದಿಂದ 3%ಗೆ ಇಳಿಸಲು ಮನವಿ ಮಾಡಿದ್ದೇವೆ" ಎಂದರು.