ಬೆಂಗಳೂರು: ಚಳಿಗಾಲದ ಅಧಿವೇಶನದ ಮೊದಲ ದಿನವಾದ ಇಂದು ವಿಧಾನಸಭೆಯಲ್ಲಿ ಆಸನಗಳು ಖಾಲಿ ಖಾಲಿಯಾಗಿದ್ದವು. ಆಡಳಿತ ಪಕ್ಷದಿಂದ ಮುಖ್ಯಮಂತ್ರಿ ಸೇರಿದಂತೆ 12 ಸಚಿವರು, 27 ಶಾಸಕರು ಹಾಜರಿದ್ದರು. ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‍ನ 26 ಶಾಸಕರು ಹಾಗೂ ಜೆಡಿಎಸ್‍ನಿಂದ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಸೇರಿದಂತೆ ಐವರು ಶಾಸಕರು ಮಾತ್ರ ಭಾಗಿಯಾಗಿದ್ದರು.
ಕಲಾಪ 11 ಗಂಟೆಗೆ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ನಿರ್ಣಯ ಮಂಡಿಸಿದರು. ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆತುರಾತುರವಾಗಿ ಸಂತಾಪ ನಿರ್ಣಯ ಬೆಂಬಲಿಸಿ ಕೆಲವೇ ನಿಮಿಷಗಳಲ್ಲಿ ತಮ್ಮ ಮಾತುಗಳನ್ನು ಮುಗಿಸಿ ಸದನದಿಂದ ನಿರ್ಗಮಿಸಿದರು.
ಆಡಳಿತ ಪಕ್ಷದ ಮೊದಲ ಸಾಲಿನಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಜೆ.ಸಿ.ಮಾಧುಸ್ವಾಮಿ, ಕಂದಾಯ ಸಚಿವ ಆರ್.ಅಶೋಕ್, ಎರಡನೇ ಸಾಲಿನಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್, ಸಚಿವ ಪ್ರಭು ಚೌವ್ಹಾಣ್, ಸಚಿವೆ ಶಶಿಕಲಾ ಜೊಲ್ಲೆ, ಕೃಷಿ ಸಚಿವ ಬಿ.ಸಿ.ಪಾಟೀಲ್, ಸಚಿವ ಎಸ್.ಟಿ.ಸೋಮಶೇಖರ್ ಬಿಟ್ಟರೆ ಬಹುತೇಕ ಕುರ್ಚಿಗಳು ಖಾಲಿಯಾಗಿದ್ದವು.
ಪ್ರತಿಪಕ್ಷದ ಮೊದಲ ಸಾಲಿನಲ್ಲಿ ಸಿದ್ದರಾಮಯ್ಯ ಬಿಟ್ಟರೆ ಯಾರೂ ಇರಲಿಲ್ಲ. ಸ್ವಲ್ಪ ಹೊತ್ತಿನ ನಂತರ ರಾಮಲಿಂಗಾರೆಡ್ಡಿ ಆಗಮಿಸಿದರು. ಮೊದಲ ದಿನ ಕಾಂಗ್ರೆಸ್‍ನಿಂದ ಕೇವಲ 25 ಶಾಸಕರು ಹಾಜರಾಗಿದ್ದರು. ಜೆಡಿಎಸ್‍ನಿಂದ ಹೆಚ್.ಕೆ.ಕುಮಾರಸ್ವಾಮಿ ಸೇರಿದಂತೆ ಕೆಲವೇ ಮಂದಿ ಶಾಸಕರು ಸದನದಲ್ಲಿ ಹಾಜರಿದ್ದರು. ಮಧ್ಯಾಹ್ನ 12 ಗಂಟೆಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಗಮಿಸಿದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ ಮತ್ತಿತರ ಶಾಸಕರು ಗೈರಾಗಿದ್ದರು.
ಆಸನ ಹುಡುಕಾಡಿದ ಜಿ.ಟಿ.ದೇವೇಗೌಡ: ಒಂದೆರಡು ಅಧಿವೇಶನದಿಂದ ದೂರ ಉಳಿದಿದ್ದ ಮಾಜಿ ಸಚಿವ, ಜೆಡಿಎಸ್ ಮುಖಂಡ ಜಿ.ಟಿ.ದೇವೇಗೌಡ ಇಂದು ಸದನದಲ್ಲಿ ಕಾಣಿಸಿಕೊಂಡರು. ಆದರೆ ಅವರ ಆಸನ ಬದಲಾಗಿದ್ದನ್ನು ಗಮನಿಸಿ ಹುಡುಕಾಟ ನಡೆಸಲಾರಂಭಿಸಿದರು. ಆಗ ಅಲ್ಲೇ ಇದ್ದ ಸಹಾಯಕರು ಹುಡುಕಾಡಿ ಅವರ ಹೆಸರಿನ ಆಸನ ತೋರಿಸಿದರು. ಸ್ವಲ್ಪ ಹೊತ್ತು ಶಾಸಕ ಶಿವಲಿಂಗೇಗೌಡರ ಬಳಿ ಕುಳಿತಿದ್ದ ಜಿ.ಟಿ.ದೇವೇಗೌಡ, ನಂತರ ತಮ್ಮ ಆಸನದ ಕಡೆ ತೆರಳಿದರು. ಒಟ್ಟಾರೆ ಮೊದಲ ದಿನ ಕಲಾಪಕ್ಕೆ ಶಾಸಕರ ಗೈರು ಎದ್ದು ಕಾಣುತ್ತಿತ್ತು.