ಕರ್ನಾಟಕ

karnataka

ETV Bharat / state

ಬೆಂಗಳೂರು: ಗ್ಯಾರೇಜ್‌ನಲ್ಲಿ ಅಗ್ನಿ ಅವಘಡ, 18 ಬಸ್‌ಗಳು ಬೆಂಕಿಗೆ ಆಹುತಿ

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ಗ್ಯಾರೇಜ್‌ನಲ್ಲಿ ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದಾಗ ಅನಾಹುತ ನಡೆದಿದ್ದು, 18 ಬಸ್​ಗಳು ಬೆಂಕಿಗೆ ಆಹುತಿಯಾಗಿವೆ.

Fire breaks out in garage  many buses destroyed in Bengaluru  Fire incident in Bengaluru  ಗ್ಯಾರೇಜ್‌ನಲ್ಲಿ ಅಗ್ನಿ ಅವಘಡ  ಐದಕ್ಕೂ ಅಧಿಕ ಬಸ್‌ಗಳು ಆಹುತಿ  ಬೆಂಗಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ  ಗ್ಯಾರೇಜ್‌ನಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡ  ಬೆಂಗಳೂರಿನ ವೀರಭದ್ರದ ನಗರ  ಐದಕ್ಕೂ ಅಧಿಕ ಬಸ್‌ಗಳು ಅಗ್ನಿಗಾಹುತಿ
ಗ್ಯಾರೇಜ್‌ನಲ್ಲಿ ಅಗ್ನಿ ಅವಘಡ

By ETV Bharat Karnataka Team

Published : Oct 30, 2023, 1:19 PM IST

Updated : Oct 30, 2023, 9:55 PM IST

ಗ್ಯಾರೇಜ್‌ನಲ್ಲಿ ಅಗ್ನಿ ಅವಘಡ

ಬೆಂಗಳೂರು :ಗ್ಯಾರೇಜ್‌ನಲ್ಲಿ ವೆಲ್ಡಿಂಗ್‌ ಕೆಲಸ ನಡೆಯುತ್ತಿದ್ದಾಗ ಆಕಸ್ಮಿಕವಾಗಿ ಜರುಗಿದ ಅಗ್ನಿ ಅವಘಡದಲ್ಲಿ 18 ಖಾಸಗಿ ಬಸ್‌ಗಳು ಸುಟ್ಟು ಕರಕಲಾದ ಘಟನೆ ಬೆಂಗಳೂರಿನ ವೀರಭದ್ರ ನಗರದಲ್ಲಿ ನಡೆದಿದೆ. ಎಸ್​ವಿ ಕೋಚ್ ಎನ್ನುವ ಹೆಸರಿನ ಗ್ಯಾರೇಜ್‌ನಲ್ಲಿ ಹೊಸ ಹಾಗೂ ಹಳೆಯ ಬಸ್ ಇಂಜಿನ್‌ಗಳಿಗೆ ಬಾಡಿ ಅಳವಡಿಸುವ ಕೆಲಸ ಮಾಡಲಾಗುತ್ತಿತ್ತು. ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಬೆಂಕಿ ಗ್ಯಾರೇಜ್​ನಲ್ಲಿ ನಿಂತಿರುವ ಬಸ್‌ಗಳಿಗೆ ಆವರಿಸಿದೆ ಎನ್ನಲಾಗ್ತಿದೆ.

ಇಂದು ಬೆಳಿಗ್ಗೆ 11.30ರ ಸುಮಾರಿಗೆ ಅವಘಡ ಸಂಭವಿಸಿದೆ. ನೋಡ ನೋಡುತ್ತಿದ್ದಂತೆ ಖಾಸಗಿ ಬಸ್‌ಗಳು ಅಗ್ನಿಗಾಹುತಿಯಾಗಿವೆ. ಈ ಬಗ್ಗೆ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಸಾಮಾನ್ಯವಾಗಿ ಗ್ಯಾರೇಜ್​ನಲ್ಲಿ ನಿತ್ಯ 25 ರಿಂದ 30 ಬಸ್‌ಗಳು ರಿಪೇರಿಗೆ ಇರುತ್ತವೆ. ಸುಮಾರು 25 ಜನರು ಅಲ್ಲಿ ಕೆಲಸ ಮಾಡುತ್ತಾರೆ‌. ಇಂದು ವೆಲ್ಡಿಂಗ್ ಕೆಲಸ ಮಾಡುವ ಸಮಯದಲ್ಲಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ಅಗ್ನಿಶಾಮಕದಳದ ಕಾರ್ಯಾಚರಣೆಗೆ ನೆರವಾದ ವರುಣ:ಅವಘಡ ಸಂಭವಿಸಿದ ಸ್ಥಳದ ಸುತ್ತಮುತ್ತ ಕೆಲಕಾಲ ಸಣ್ಣಗೆ ಸುರಿದ ಮಳೆ, ಅಗ್ನಿಶಾಮಕದಳದ ಸಿಬ್ಬಂದಿಗೆ ನೆರವಾಗಿದೆ. ಬೆಂಕಿಯನ್ನ ಹತೋಟಿಗೆ ತರಲಾಗಿದ್ದು, ಘಟನಾ ಸ್ಥಳದ ಸುತ್ತಮುತ್ತ ಹೊಗೆ ಆವರಿಸಿದೆ. ಅಗ್ನಿ ದುರಂತ ನಡೆದ ಸ್ಥಳಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಲಿದ್ದು, ಪರಿಶೀಲನೆ ನಡೆಸಲಿದ್ದಾರೆ.

ಅಗ್ನಿಶಾಮಕ ಅಧಿಕಾರಿ ಮಾಹಿತಿ:ಘಟನೆ ಬಗ್ಗೆ ಮಾಹಿತಿ ನೀಡಿರುವ ಅಗ್ನಿಶಾಮಕ ದಳದ ಡೆಪ್ಯುಟಿ ಡೈರೆಕ್ಟರ್ ಗುರುಲಿಂಗಯ್ಯ, ''ಹತ್ತು ಅಗ್ನಿಶಾಮಕ ವಾಹನಗಳಿಂದ ಬೆಂಕಿ ಆರಿಸುವ ಕಾರ್ಯ ನಡೆದಿದ್ದು, ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳದಲ್ಲಿ ಯಾವುದೂ ಹೊಸ ಬಸ್‌ಗಳಿರಲಿಲ್ಲ. ಹಳೆಯ ಬಸ್‌ಗಳ ದುರಸ್ತಿ ಕಾರ್ಯ ನಡೆಸಲಾಗುತ್ತಿತ್ತು. ಅವಘಡದಲ್ಲಿ 18 ಬಸ್‌ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಬೆಂಕಿ ಕಾಣಿಸಿಕೊಂಡ ಬಳಿಕ 10 ಬಸ್‌ಗಳನ್ನು ಸ್ಥಳಾಂತರ ಮಾಡಲಾಗಿದೆ. ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎನ್ನುವುದು ಕಂಡುಬಂದಿದೆ. ಅವಘಡಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ'' ಎಂದು ತಿಳಿಸಿದ್ದಾರೆ.

ಇದನ್ನು ಓದಿ:ಬೆಂಗಳೂರಲ್ಲಿ ಟ್ರಾನ್ಸ್‌ಫಾರ್ಮರ್ ಸ್ಫೋಟದಿಂದ ಅಗ್ನಿ ಅವಘಡ.. ಮನೆ, ಗುಜರಿ ಅಂಗಡಿ ಸೇರಿ ವಾಹನಗಳು ಬೆಂಕಿಗಾಹುತಿ

ಡಿಸಿಎಂ, ಸಚಿವರು ಭೇಟಿ:ಸ್ಥಳಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ನಂತರ ಮಾತನಾಡಿದ ಡಿ.ಕೆ. ಶಿವಕುಮಾರ್ ''ವೇಲ್ಡಿಂಗ್ ಸಂದರ್ಭದಲ್ಲಿ ಕಿಡಿಯಿಂದ ಒಂದು ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ನಂತರ ಅದು ಬೇರೆ ಬಸ್‌ಗಳಿಗೆ ವ್ಯಾಪಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದು ಖಾಸಗಿಯವರಿಗೆ ಸೇರಿದ ಜಾಗ, ಯಾವುದೇ ಆಗಲಿ ಇಂತಹ ಅನಾಹುತಗಳು ಆಗಬಾರದು. ಇಂತಹ ಸಂದರ್ಭಗಳಲ್ಲಿ ಜಾಗರೂಕರಾಗಿರಬೇಕು. ಇಲ್ಲಿ ಕೆಲಸ ಮಾಡುವವರು ಮುಂದಿನ ದಿನಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸುತ್ತೇನೆ. ಅಗ್ನಿಶಾಮಕ ಹಾಗೂ ಪೊಲೀಸರು ಇದರ ಬಗ್ಗೆ ಒಂದು ವರದಿ ನೀಡುವಂತೆ ಹೇಳುತ್ತೇನೆ. ಏನೇನು ನಷ್ಟವಾಗಿದೆ ಎಂದು ಗಮನಿಸಿ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ'' ಎಂದರು.

ಇದನ್ನೂ ಓದಿ:ಅತ್ತಿಬೆಲೆ ಪಟಾಕಿ ದುರಂತ: ಮೃತರ ಕುಟುಂಬಗಳಿಗೆ ಕರ್ನಾಟಕ, ತಮಿಳುನಾಡು ಸರ್ಕಾರದಿಂದ ಪರಿಹಾರ ಘೋಷಣೆ

Last Updated : Oct 30, 2023, 9:55 PM IST

ABOUT THE AUTHOR

...view details