ಬೆಂಗಳೂರು:ಮದುವೆಯ ಆಮಿಷವೊಡ್ಡಿ ಅತ್ಯಾಚಾರ ಎಸಗಿ, ಗರ್ಭಪಾತದ ಮಾತ್ರೆ ನುಂಗಿಸಿ, ಹಲ್ಲೆ ನಡೆಸಿದ್ದಾಗಿ ಇನ್ಸ್ಪೆಕ್ಟರ್ ವಿರುದ್ಧ ಮಹಿಳಾ ಕಾನ್ಸ್ಟೇಬಲ್ ದೂರು ನೀಡಿದ್ದಾರೆ. ಕಾನ್ಸ್ಟೇಬಲ್ ದೂರಿನ ಮೇರೆಗೆ ಗೋವಿಂದರಾಜನಗರ ಠಾಣೆಯಲ್ಲಿ ರಾಜ್ಯ ಗುಪ್ತ ದಳ ಇನ್ಸ್ಪೆಕ್ಟರ್ ಆರ್.ಮಧುಸೂದನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಹಿಳಾ ಕಾನ್ಸ್ಟೇಬಲ್ ತನ್ನ ದೂರಿನಲ್ಲಿ 2017ರಿಂದ ಇನ್ಸ್ಪೆಕ್ಟರ್ ಪರಿಚಯವಿದ್ದು, ಮದುವೆ ಆಗುವುದಾಗಿ ತನಗೆ ನಂಬಿಸಿದ್ದರು. ಮಾತನಾಡಬೇಕೆಂದು ಮೈಸೂರು ರಸ್ತೆಯ ಬಿಡದಿ ಸಮೀಪದ ರೆಸಾರ್ಟ್ಗೆ ಕರೆದುಕೊಂಡು ಹೋಗಿ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಪರಿಣಾಮ ಆರೋಗ್ಯದಲ್ಲಿ ಏರುಪೇರು ಆಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮದುವೆ ಆಗುವುದಾಗಿ ನಂಬಿಸಿ ಗರ್ಭಪಾತ:ಬಳಿಕ ಇನ್ಸ್ಪೆಕ್ಟರ್, ಈ ಬಗ್ಗೆ ಯಾರಿಗೂ ಹೇಳಬೇಡ. ನಾನೇ ನಿನ್ನನ್ನು ಮದುವೆ ಆಗುತ್ತೇನೆ ನಂಬಿಸಿದ್ದರು. ನಂತರ 2019ರ ಫೆಬ್ರವರಿಯಲ್ಲಿ 3 ತಿಂಗಳ ಗರ್ಭಿಣಿ ಆಗಿದ್ದಾಗ ಆರೋಪಿ ತನ್ನ ಕಾರಿನಲ್ಲಿ ಚಿಕ್ಕಬಳ್ಳಾಪುರಕ್ಕೆ ಕಾರಿನಲ್ಲಿ ಕರೆದುಕೊಂಡು ಹೋಗಿ ಗರ್ಭಪಾತ ಮಾತ್ರೆಯನ್ನು ಒತ್ತಾಯವಾಗಿ ನುಂಗಿಸಿದ್ದರು. ಅಲ್ಲದೆ, ನಂತರ ಆರೋಗ್ಯದಲ್ಲಿ ಏರುಪೇರು ಆದಾಗ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸಿದ್ದರು ಎಂದು ದೂರಿದ್ದಾರೆ.