ಬೆಂಗಳೂರು:ಇಲ್ಲಿನ ವಿಜಯನಗರದ ಎಂಸಿ ಲೇಔಟ್‌ನ ಬಿಜಿಎಸ್ ಆಟದ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಮೈದಾನದಲ್ಲಿ ಮಾರ್ಚ್ 19 ರಂದು ಕಾಂಗ್ರೆಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಕಾಂಗ್ರೆಸ್ ಕಾರ್ಯಕ್ರಮಕ್ಕಾಗಿ ಅನುಮತಿ ಪಡೆದು ಉಗಾದಿ ಉತ್ಸವ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.
ಈ ಸಂಬಂಧ ಎರಡೂ ಕಡೆಯವರ ನಡುವೆ ಗಲಾಟೆ ನಡೆದು ಹೊಡೆದಾಡಿಕೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಗಲಾಟೆ ವೇಳೆ ಕೆಲ ಪೊಲೀಸರಿಗೂ ಗಾಯಗಳಾಗಿದೆ. ಗಾಯಗೊಂಡವರನ್ನು ವಿಜಯನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆ ಕುರಿತಂತೆ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಮಾಧ್ಯಮದವರೊಂದಿಗೆ ಮಾತನಾಡಿ, ''ವಿಜಯನಗರದ ಎಂ.ಸಿ. ಲೇಔಟ್‌ನ ಬಿಜಿಎಸ್ ಆಟದ ಮೈದಾನದಲ್ಲಿ ಮಾರ್ಚ್ 19 ರಂದು ಸ್ತ್ರೀ ಶಕ್ತಿ ಮಹಿಳಾ ಸಮಾವೇಶಕ್ಕೆ ಉಮಾಶಂಕರ್ ಎಂಬುವರು ಬಿಬಿಎಂಪಿ ಕಡೆಯಿಂದ ಅನುಮತಿ ಪಡೆದಿದ್ದರು. ಈ ಸಮಾವೇಶದ ಸಂಬಂಧ ಒಂದು ಗುಂಪಿನ ಕಾರ್ಯಕರ್ತರು ಬ್ಯಾನರ್ ಕಟ್ಟುತ್ತಿದ್ದಾಗ ಮತ್ತೊಂದು ಗುಂಪಿನ ಕಾರ್ಯಕರ್ತರು ಬಂದು ಗಲಾಟೆ ಮಾಡಿದ್ದರು. ಆ ವೇಳೆ, ಸ್ಥಳದಲ್ಲಿ ಕೆಲ ಮಹಿಳೆಯರೂ ಸಹ ಇದ್ದರು'' ಎಂದು ತಿಳಿಸಿದ್ದಾರೆ.