ಕರ್ನಾಟಕ

karnataka

ETV Bharat / state

ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆದ ಕೆ. ಎಸ್. ಈಶ್ವರಪ್ಪನವರ ಕಿರು ಪರಿಚಯ - ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆದ ಕೆ.ಎಸ್​.ಈಶ್ವರಪ್ಪ

ಬಿ ಎಸ್ ಯಡಿಯೂರಪ್ಪನವರ ಆಪ್ತವಯಲದಿಂದ ಆಯ್ಕೆಯಾಗಿ ಸಚಿವರಾಗಿ ಉತ್ತಮ ಕೆಲಸ ಮಾಡಿ ಬಿಜಿಪಿಯಲ್ಲಿ ಗುರುತಿಸಿಕೊಂಡಿರುವ ಕೆ ಎಸ್​ಈಶ್ವರಪ್ಪನವರು ಸಿಎಂ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಅವರ ರಾಜಕೀಯ ಜೀವನದ ಕುರಿತಂತೆ ಕೆಲವು ಮಾಹಿತಿಗಳು ಇಂತಿವೆ..

KS Eshwarappa
ಕೆ.ಎಸ್​.ಈಶ್ವರಪ್ಪ

By

Published : Aug 4, 2021, 4:16 PM IST

Updated : Aug 4, 2021, 5:26 PM IST

ಬೆಂಗಳೂರು :ಬಿ ಎಸ್​ ಯಡಿಯೂರಪ್ಪನವರ ಸಂಪುಟದಲ್ಲಿ ಮಂತ್ರಿ ಸ್ಥಾನ ಪಡೆದು ಆಡಳಿತ ನಡೆಸುವ ಮೂಲಕ ಉತ್ತಮ ನಾಯಕ ಎನಿಸಿಕೊಂಡಿರುವ ಶ್ರೀ ಕೆ ಎಸ್ ಈಶ್ವರಪ್ಪನವರು ಸಿಎಂ ಬಸವರಾಜ ಬೊಮ್ಮಾಯಿಯವರ ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಈ ಮೂಲಕ ಮತ್ತೆ ಅಧಿಕಾರ ಪಡೆದು ಮುನ್ನುಗ್ಗಿದ್ದಾರೆ. ಇವರ ರಾಜಕೀಯ ಜೀವನದ ಕುರಿತ ಚಿರು ಪರಿಚಯ ಹೀಗಿದೆ.

ಬಾಲ್ಯ ಜೀವನ :ಬಳ್ಳಾರಿ ಮೂಲದ ಕೌಡಿಕ ಕುಟುಂಬ ಹಲವು ದಶಕಗಳ ಕೆಳಗೆ ಶಿವಮೊಗ್ಗಯಲ್ಲಿ ನೆಲೆಸಿತ್ತು. ಈ ಕುಟುಂಬದ ಶ್ರೀ ಶರಣಪ್ಪ ಮತ್ತು ಶ್ರೀಮತಿ ಬಸಮ್ಮನವರ 4ನೇ ಪುತ್ರರಾಗಿ ಶ್ರೀ ಕೆ ಎಸ್ ಈಶ್ವರಪ್ಪನವರು 1948ರಲ್ಲಿ ಶಿವಮೊಗ್ಗದಲ್ಲಿ ಜನಿಸಿದರು. ಶಾಲಾ ದಿನಗಳಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್​​ಎಸ್ಎಸ್) ಶಾಖೆಗಳ ಮೂಲಕ ವ್ಯಕ್ತಿತ್ವ ರೂಪಿಸಿಕೊಂಡರು.

ಆರ್​ಎಸ್​ಎಸ್​ ಕಾರ್ಯಕರ್ತನಾಗಿ ಈಶ್ವರಪ್ಪ

ನಗರದ ಪ್ರತಿಷ್ಠಿತ ಸರ್ಕಾರಿ ಪ್ರೌಢಶಾಲೆಯಲ್ಲಿ ಮೆಟ್ರಿಕ್ ವಿದ್ಯಾಭ್ಯಾಸ ಮುಗಿಸಿ ನಂತರ ನ್ಯಾಶನಲ್ ಕಾಮರ್ಸ್ ಕಾಲೇಜಿನ ವಿದ್ಯಾರ್ಥಿಯಾದರು. ಎರಡನೇ ವರ್ಷದ ಬಿಕಾಂ ಓದುವಾಗಲೆ ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕನಾಗಿ ನಾಯಕತ್ವದ ಗುಣ ತೋರಿದ್ದರು.

ಉಪಾಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುವ ಮೂಲಕ ವಿದ್ಯಾರ್ಥಿಗಳ ನಂಬಿಕೆಗೆ ಪಾತ್ರರಾದರು. ಈ ಸಂದರ್ಭದಲ್ಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​​ನಲ್ಲಿ ಸಕ್ರಿಯರಾದರು. ಸದಾ ಮುನ್ನುಗ್ಗುವ ಸ್ವಭಾವದಿಂದಾಗಿ ಶೀಘ್ರವಾಗಿ ಎಬಿವಿಪಿಯ ರಾಜ್ಯ ಉಪಾಧ್ಯಕ್ಷರಾಗಿ ಯಶಸ್ವಿಯಾಗಿ ಜವಾಬ್ದಾರಿ ಹೊತ್ತರು.

ಸಂಘದ ಶಾಖೆಗಳಲ್ಲಿ ಮೈಗೂಡಿಸಿಕೊಂಡು ರಾಷ್ಟ್ರಪ್ರೇಮ, ಸಾಮಾಜಿಕ ಕಳಕಳಿಯ ಗುಣಗಳಿಂದಾಗಿ 1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇವರು ಸಹಜವಾಗಿಯೇ ಹೋರಾಟಕ್ಕೆ ಧುಮುಕಿದರು. ಪ್ರಜಾಪ್ರಭುತ್ವದ ರಕ್ಷಣೆಗಾಗಿ ಚಳವಳಿ ನಡೆಸಿ ಹಲವು ತಿಂಗಳು ಸೆರೆಮನೆ ವಾಸ ಅನುಭವಿಸಿದರು.

ವಿದ್ಯಾಭ್ಯಾಸದ ನಂತರ ತಮ್ಮದೆ ಸ್ವಂತ ವ್ಯವಹಾರ ಆರಂಭಿಸಿದ ಈಶ್ವರಪ್ಪನವರು, ಸ್ವಾಮಿ ವಿವೇಕಾನಂದರಿಂದ ತೀವ್ರವಾಗಿ ಆಕರ್ಷಿತರಾಗಿದ್ದರು. ಬಳಿಕ ಅದಕ್ಕಾಗಿ ತಾವು ಆರಂಭಿಸಿದ ವಿವೇಕ್ ಏಜೆನ್ಸೀಸ್ ಹಾಗೂ ವಿವೇಕ್ ಅಗರಬತ್ತಿ ಮೊದಲಾದ ಘಟಕಗಳು ಇವರಲ್ಲಿದ್ದ ‘ಉದ್ದಿಮೆದಾರ’ನನ್ನು ಹೊರತಂದವು.

ವೈವಾಹಿಕ ಜೀವನ :ಈ ಹಂತದಲ್ಲೇ ಶ್ರೀಮತಿ ಜಯಲಕ್ಷ್ಮಿಯವರನ್ನು ವರಿಸಿದ ಶ್ರೀಯುತರದ್ದು ತೃಪ್ತಿದಾಯಕ, ಸಂತಸದ ವೈವಾಹಿಕ ಜೀವನವಾಗಿತ್ತು. ಇದೆಲ್ಲಕ್ಕಿಂತ ವಿಶೇಷವಾಗಿ, ಅವರೊಬ್ಬ ಕೌಟುಂಬಿಕ ವ್ಯಕ್ತಿ, ಬಿಡುವಿನ ವೇಳೆಯಲ್ಲಿ ಮಡದಿ ಮಕ್ಕಳೊಡನೆ ಕಾಲ ಕಳೆಯುವುದನ್ನು ಬಯಸುತ್ತಾರೆ.

ಇಂದಿಗೂ ಪ್ರತಿ ಭಾನುವಾರ ಕುಟುಂಬದ ಸದಸ್ಯರೊಡನೆ ಮನೆಯಲ್ಲಿ ತಪ್ಪದೆ ಭಜನೆ ನಡೆಸುವ ಈಶ್ವರಪ್ಪನವರ ಧೈವಭಕ್ತಿ ಅಪಾರವಾಗಿದೆ. ಸದಾ ತೀರ್ಥಕ್ಷೇತ್ರಗಳಿಗೆ, ದೇವಾಲಯಗಳಿಗೆ ತಪ್ಪದೆ ಭೇಟಿ ನೀಡುತ್ತಾರೆ. ಜನತೆ ಹಾಗೂ ಜನಾರ್ಧನರ ಸೇವೆಯಲ್ಲೇ ತಮ್ಮನ್ನು ತಾವು ತೊಡಗಿಕೊಂಡಿರುವ ಅಪರೂಪದ ಸರಳ ರಾಜಕಾರಣಿ ಶ್ರೀ ಕೆ.ಎಸ್.ಈಶ್ವರಪ್ಪ.

ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಈಶ್ವರಪ್ಪ

ಬಿಜೆಪಿ ತಳ ಹಂತದ ಕಾರ್ಯಕರ್ತನಾಗಿ ರೂಪುಗೊಂಡ ಈಶ್ವರಪ್ಪ :ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಜನ ಸಂಘ ನಂತರ ಭಾರತೀಯ ಜನತಾ ಪಕ್ಷದ ತಳಹಂತದ ಕಾರ್ಯಕರ್ತರಾಗಿ ರಾಜಕೀಯ ಚಟುವಟಿಕೆಗಳನ್ನು ಆರಂಭಿಸಿದರು. ಶಿವಮೊಗ್ಗ ನಗರ ಘಟಕದ ಕಾರ್ಯದರ್ಶಿಯಾಗಿ ನಂತರ ಶಿವಮೊಗ್ಗ ನಗರ ಸಮಿತಿಯ ಬಿಜೆಪಿ ಅಧ್ಯಕ್ಷರಾಗಿ ಕೆಲಸ ಮಾಡಿದರು.

ಎಲ್ಲರೊಡನೆ ಬೆರೆಯುವ ಸ್ನೇಹ ಪ್ರವೃತ್ತಿ, ಹಾಸ್ಯಭರಿತ ಮಾತುಗಳು ಹಾಗೂ ಸರಳ ವ್ಯಕ್ತಿತ್ವ ಇವರಿಗೆ ಬೇಗನೆ ಹೆಸರು ತಂದಿತು. ಎಲ್ಲಾ ವರ್ಗದ ಜನರೊಂದಿಗೆ, ಎಲ್ಲಾ ಹಂತಗಳ ಕಾರ್ಯಕರ್ತರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದರಿಂದಲೇ 1989ರಲ್ಲಿ ಪಕ್ಷವು ಇವರಿಗೆ ಶಿವಮೊಗ್ಗ ವಿಧಾನ ಸಭೆಗೆ ಸ್ಪರ್ಧಿಸಲು ಅವಕಾಶ ನೀಡಿತು.

ಸಚಿವ ಸ್ಥಾನ ಪಡೆದ ಈಶ್ವರಪ್ಪ

ದೊಡ್ಡ ನಾಯಕರನ್ನು ಸೋಲಿಸಿ ಜಯ ಸಾಧಿಸಿದ ಸಚಿವ :ಕೆ.ಎಸ್.ಈಶ್ವರಪ್ಪ ಎದುರಿಸಿದ ಮೊದಲ ಚುನಾವಣೆಯಲ್ಲೇ (1989) ವಿಜಯಮಾಲೆ ಧರಿಸಿದರು. ಅಂದು ಸಚಿವರಾಗಿದ್ದ, ಶ್ರೀ ಕೆ ಹೆಚ್ ಶ್ರೀನಿವಾಸರಂತಹ ದೊಡ್ಡನಾಯಕರನ್ನು ಸೋಲಿಸುವ ಮೂಲಕ ರಾಜ್ಯದ ಗಮನ ಸೆಳೆದರು. ಮೊದಲ ಅವಧಿಯಲ್ಲೇ ಶಿವಮೊಗ್ಗದ ಕುಡಿಯುವ ನೀರಿನ ಯೋಜನೆ, ಸರ್ಕಾರಿ ಬಸ್ ನಿಲ್ದಾಣ, ವಸತಿಯುಕ್ತ ಮಹಿಳಾ ಪಾಲಿಟೆಕ್ನಿಕ್, ದೂರದರ್ಶನ ಕೇಂದ್ರ ಮೊದಲಾದವು ಇವರ ಪ್ರಯತ್ನದಲ್ಲೇ ಸಾಕಾರಗೊಂಡವು. ಇದರ ಜೊತೆಗೆ ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ಹೊತ್ತರು.

ಮುತ್ಸದ್ಧಿತನದಿಂದ ಮುನ್ನುಗಿದ ಹೋರಾಟಗಾರ :ಜಿಲ್ಲಾ ಘಟಕದ ನಂತರ 1991ರಲ್ಲಿ ಬಿಜೆಪಿ ಯುವಮೋರ್ಚಾದ ರಾಜ್ಯಾಧ್ಯಕ್ಷರಾದರು. ಎಲ್ಲೆಡೆ ಯುವ ವೃಂದವನ್ನು ಸಂಘಟಿಸುವಲ್ಲಿ ಯಶಸ್ವಿಯಾದರು. ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಬಿರುಸಿನಿಂದ ಪಕ್ಷದ ಸಂಘಟನೆಗೆ ಮುಂದಾದರು. ಅವರು ತೋರಿದ ಕುಶಲತೆ, ಜಾಣ್ಮೆ ಹಾಗೂ ಅಚಲ ನಿಷ್ಠೆಗಳು, ಸಹಜವಾಗೇ ಇವರಿಗೆ ಒಳ್ಳೆಯ ಹೆಸರು ತಂದಿತು. ಶ್ರೀ ಯಡಿಯೂರಪ್ಪನವರ ನಂತರ ರಾಜ್ಯ ಘಟಕದ ಅಧ್ಯಕ್ಷರಾದರು(1993) ಈ ಮೂಲಕ ರಾಜಕೀಯ ಪಕ್ಷವೊಂದರ ರಾಜ್ಯಾಧ್ಯಕ್ಷರಾದ ಮೊದಲ ಹಿಂದುಳಿದ ವರ್ಗದ (ಕುರುಬ ಜನಾಂಗದ) ನೇತಾರ ಎಂಬ ಕೀರ್ತಿಗೆ ಪಾತ್ರರಾದರು. ತಮ್ಮ ಸಾಮರ್ಥ್ಯದಿಂದಲೇ 1995ರಲ್ಲಿ ಎರಡನೆ ಅವಧಿಗೂ ರಾಜ್ಯಾಧ್ಯಕ್ಷರಾಗಿ ಚುನಾಯಿತರಾದರು. ಅಂದು ವಿಧಾನ ಸಭೆಯಲ್ಲಿ ಕೇವಲ 4 ಶಾಸಕರನ್ನು ಹೊಂದಿದ್ದ ಬಿಜೆಪಿ ಶ್ರೀ ಕೆ.ಎಸ್.ಈಶ್ವರಪ್ಪನವರ ನಾಯಕತ್ವದಲ್ಲಿ 40 ಸ್ಥಾನಗಳನ್ನು ಪಡೆಯಿತು. ಶಾಸಕಾಂಗ ಪಕ್ಷದ ನಾಯಕತ್ವವು ಈಶ್ವರಪ್ಪನವರ ಹೆಗಲೇರಿತು. ಹುಬ್ಬಳ್ಳಿಯ ಈದ್ಗಾ ಮೈದಾನದ ಹೋರಾಟ, ಶ್ರೀನಗರಕ್ಕೆ ತಿರಂಗಯಾತ್ರೆ, ಬಗರ್ ಹುಕುಂ ಚಳವಳಿ, ಅಯೋಧ್ಯೆಯ ರಾಮಮಂದಿರದ ಹೋರಾಟಗಳಲ್ಲಿ ತಮ್ಮ ಗಡುಸಾದ ನಾಯಕತ್ವ ಹಾಗೂ ಮುತ್ಸದ್ಧಿತನದಿಂದ ಈಶ್ವರಪ್ಪನವರು ಪ್ರಸಿದ್ಧಿ ಪಡೆದರು.

ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಪಡೆದು ಪ್ರಮಾಣವಚನ ಸ್ವೀಕಾರ

ರಾಜಕೀಯ ಜೀವನ :

  • 1989 ಹಾಗೂ 1994ರಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಶಾಸಕರಾದ ಶ್ರೀ ಕೆ.ಎಸ್.ಈಶ್ವರಪ್ಪನವರು 1999ರಲ್ಲಿ ಅನಿರೀಕ್ಷಿತವಾಗಿ ಸೋಲಬೇಕಾಯಿತು. ಆದರೆ, ಇವರಲ್ಲಿನ ಕಾರ್ಯದಕ್ಷತೆ ಗುರುತಿಸಿದ ಕೇಂದ್ರ ಸರ್ಕಾರವು ಇವರನ್ನು ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷರಾನ್ನಾಗಿ ನೇಮಿಸಿತು. ಅಲ್ಲಿಯವರೆಗೂ ಕೇವಲ ಸಂಶೋಧನಾ ಲ್ಯಾಬ್ ಗಳಿಗೆ ಮಾತ್ರ ಸೀಮಿತವಾಗಿದ್ದ ರೇಷ್ಮೆ ಮಂಡಳಿಯನ್ನು ರೈತರ ಹೊಲಗಳಿಗೆ ತಂದ ಕೆ.ಎಸ್.ಈಶ್ವರಪ್ಪ ತಾವು ರೈತರ ಜನಸಾಮಾನ್ಯರ ಸ್ನೇಹಿತ ಎಂಬುದನ್ನು ಸಾಬೀತುಪಡಿಸಿದರು.
  • 2001ರ ಕನಕಪುರ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ಶ್ರೀ ಹೆಚ್.ಡಿ.ದೇವೇಗೌಡರನ್ನು ಎದುರಿಸುವ ಮೂಲಕ ಸಂಸತ್ತಿಗೆ ಸ್ಪರ್ಧಿಸಿದ ಈಶ್ವರಪ್ಪ ರಾಷ್ಟ್ರದ ಗಮನ ಸೆಳೆದರು. ಚುನಾವಣೆಯ ನಂತರ ಮತ್ತೆ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾಗಿ ನಿಯೋಜನೆಗೊಂಡರು. ಎರಡು ಬಾರಿ ಈ ಅವಕಾಶ ಪಡೆದ ಮೊದಲಿಗರಾದರು.
  • 2004ರ ವಿಧಾನಸಭಾ ಚುನಾವಣೆಯಲ್ಲಿ ಮೂರನೆ ಅವಧಿಗೆ ಶಿವಮೊಗ್ಗದಿಂದ ಶಾಸಕರಾದರು. ವಿಧಾನಸಭೆಯಲ್ಲಿ ಬಿಜೆಪಿಯ ಹಿರಿಯ ಸದಸ್ಯರಾಗಿದ್ದು, ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
  • 2007 ರಲ್ಲಿ ಬಿಜೆಪಿಯ ಮೊದಲ ಸಮ್ಮಿಶ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿ ಅದ್ಭುತವಾಗಿ ಸಾಧನೆ ಮಾಡಿದರು. ಕಳಸಾ ಬಂಡೂರಿ ಯೋಜನೆಯನ್ನು ಆರಂಭಿಸುವಲ್ಲಿ ಇವರು ತೋರಿದ ಧೈರ್ಯ ಜನ ಮೆಚ್ಚುಗೆ ಗಳಿಸಿತು. ಹತ್ತಾರು ವರ್ಷಗಳಿಂದ ಕುಂಟುತ್ತಾ ಸಾಗಿದ್ದ 39 ಯೋಜನೆಗಳನ್ನು ಮುಗಿಸಿದ್ದೂ ಗಮನಾರ್ಹ ಸಾಧನೆ. ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನ, ಕೆರೆಗಳ ಪುನರುಜ್ಜೀವನದಂತಹ ಜನಪರ ಕಾರ್ಯಗಳಿಂದ ‘ಜ್ಹಿ’ ಟೆಲಿವಿಷನ್ ನಡೆಸಿದ ಸ್ಪರ್ಧೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಎಸ್ಎಂಎಸ್ ಗಳಿಸಿ ರಾಜ್ಯದ ಅತ್ಯುತ್ತಮ ಸಚಿವ ಎಂಬ ಜನ ಮನ್ನಣೆ ಗಳಿಸಿದರು.
  • 2008ರಲ್ಲಿ ನಡೆದ ಚುನಾವಣೆಯಲ್ಲಿ 4ನೇ ಬಾರಿಗೆ ಗೆದ್ದು ಶ್ರೀಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಇಂಧನ ಸಚಿವರಾಗಿ ಕಾರ್ಯನಿರ್ವಹಿಸಿ ನಂತರ ಭಾರತೀಯ ಜನತಾ ಪಾರ್ಟಿ ಕರ್ನಾಟಕದ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ತದ ನಂತರ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಉಪಮುಖ್ಯಮಂತ್ರಿಗಳಾಗಿ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
  • 2014ರಲ್ಲಿ ವಿಧಾನಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಲೆ ಮತ್ತು ಕ್ರೀಡೆಗಳಲ್ಲಿ ತೀವ್ರ ಆಸಕ್ತಿ ಹೊಂದಿರುವ ಈಶ್ವರಪ್ಪನವರು ಕಾಲೇಜಿನ ದಿನಗಳಲ್ಲಿ ಉತ್ತಮ ಖೋ-ಖೋ ಹಾಗೂ ಫುಟ್ ಬಾಲ್ ಪಟುವಾಗಿದ್ದರು. ಸಂಘದ ಘೋಷ್​​​ನಲ್ಲಿ ಆನಕ (Side Drum) ವಾದಕರಾಗಿಯೂ ತಮ್ಮ ಕೈಚಳಕ ತೋರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಭಿರುಚಿ ಹೊಂದಿರುವ ಶ್ರೀಯುತರು
  • 1975ರಲ್ಲಿ (Malnad Associates) ಮಲ್ನಾಡ್​​​ ಅಸೋಸಿಯೇಷನ್​​ ಎಂಬ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಪ್ರಸಕ್ತ ಶಿವಮೊಗ್ಗದ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರೂ ಆಗಿದ್ದು, ಉತ್ತಮ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜೊತೆಗೆ ಚಂದ್ರಗುಪ್ತಮೌರ್ಯ ಟ್ರಸ್ಟ್, ಕನಕ ವಿದ್ಯಾಸಂಸ್ಥೆ, ಕುರುಬರ ಸಹಕಾರ ಸಂಘ, ಶನಿದೇವರ ದೇವಸ್ಥಾನದ ಸಮಿತಿಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ.
  • 2018 ರಲ್ಲಿ ನಡೆದ 15ನೇ ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಶಾಸಕರಾಗಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅಭೂತಪೂರ್ವ ಬಹುಮತದಿಂದ ಆಯ್ಕೆಯಾದ ಶ್ರೀ ಕೆ.ಎಸ್.ಈಶ್ವರಪ್ಪನವರು ಶ್ರೀ ಯಡಿಯೂರಪ್ಪನವರ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಸಚಿವರಾಗಿ, ಡಿಸಿಎಂ ಆಗಿ ಈಶ್ವರಪ್ಪ:

  • 2006 ರಲ್ಲಿ ಬಿಜೆಪಿಯ ಮೊದಲ ಸಮ್ಮಿಶ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿ ಸೇವೆ
  • 2008ರಲ್ಲಿ ಬಿಜೆಪಿ ಸರ್ಕಾರದಲ್ಲಿ ಇಂಧನ ಸಚಿವರಾಗಿ ಸೇವೆ
  • 2012 ರಲ್ಲಿ ಬಿಜೆಪಿ ಸರ್ಕಾರದಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳಾಗಿ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಹಾಗೂ ಕಂದಾಯ ಸಚಿವ) ಸೇವೆ.
  • 2019ರಲ್ಲಿ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಸೇವೆ
Last Updated : Aug 4, 2021, 5:26 PM IST

ABOUT THE AUTHOR

...view details