ಬೆಂಗಳೂರು: ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವುದನ್ನು ವಿರೋಧಿಸಿ ಸೆ. 28ರಂದು ಕರ್ನಾಟಕ ಬಂದ್ ಕುರಿತು ರೈತ ಸಂಘಟನೆಗಳಲ್ಲಿ ಸ್ಪಷ್ಟತೆ ಇಲ್ಲದಂತಾಗಿದೆ.
ಇದೇ 28ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ನಾವು 9 ಸಂಘಟನೆಗಳು ಈ ತೀರ್ಮಾನ ಕೈಗೊಂಡಿದ್ದೇವೆ ಎಂದು ಕರ್ನಾಟಕ ರಾಜ್ಯ ಸೇನೆ ಸಂಘಟನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ. ರಾಜ್ಯ ರೈತ ಪ್ರಾಂತ ಸಂಘಟನೆಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಸಹ ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಬಂದ್‌ಗೆ ಕರೆ ಕೊಟ್ಟಿದೆ ಎಂದಿದ್ದಾರೆ.
ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮಾತನಾಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್, ಬಂದ್ ಇದೆ ಅಂತ ಹೇಳಿದವರು ಯಾರು? 25ರಂದು ರಸ್ತೆ ಬಂದ್ ಮಾಡಿ ಜೈಲ್ ಚಲೋಗೆ ಕರೆ ನೀಡಿದ್ದೇನೆ. ಆದರೆ 28ರಂದು ನಡೆಯುವ ಬಂದ್ ಬಗ್ಗೆ ನಮಗೆ ಗೊತ್ತಿಲ್ಲ. ಅದರ ಬಗ್ಗೆ ನಮ್ಮ ಕೋರ್ ಕಮಿಟಿ ಸಭೆ ನಡೆಸಬೇಕಿದೆ ಎಂದಿದ್ದಾರೆ.
ಮತ್ತೊಂದು ಕಡೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಕೂಡ 25ರಂದು ರಸ್ತೆ ರೋಖೋ ಚಳವಳಿಗೆ ಬೆಂಬಲ ನೀಡಿದ್ದಾರೆ. ಆದರೆ 28ರ ಬಂದ್ ಬಗ್ಗೆ ನಮ್ಮ ಅಭಿಪ್ರಾಯ ಮುಂದೆ ತಿಳಿಸುತ್ತೇವೆ ಎಂದಿದ್ದಾರೆ.
ಸೆ. 28ರಂದು ಕರ್ನಾಟಕ ಬಂದ್: ರೈತ ಸಂಘಟನೆಗಳಲ್ಲಿ ಮೂಡದ ಒಮ್ಮತ