ಕರ್ನಾಟಕ

karnataka

ETV Bharat / state

ಸಚಿವ ಚಲುವರಾಯಸ್ವಾಮಿ ವಿರುದ್ಧ ಪತ್ರ.. ಪೊಲೀಸ್ ತನಿಖೆಗೆ ಸೂಚನೆ: ಸಿಎಂ ಸಿದ್ದರಾಮಯ್ಯ

ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಪತ್ರ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ತನಿಖೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

Bengaluru
ಎಸ್. ನಿಜಲಿಂಗಪ್ಪ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಸಿಎಂ

By

Published : Aug 8, 2023, 1:31 PM IST

Updated : Aug 8, 2023, 4:40 PM IST

ಸಿಎಂ ಸಿದ್ದರಾಮಯ್ಯ

ಬೆಂಗಳೂರು:ಕೃಷಿ ಸಚಿವ ಚಲುವರಾಯಸ್ವಾಮಿ ಅವರ ವಿರುದ್ಧ ಬರೆದಿರುವ ಪತ್ರದ ಬಗ್ಗೆ ಪೊಲೀಸರಿಗೆ ತನಿಖೆ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ನಿಜಲಿಂಗಪ್ಪ ಅವರ ಪುಣ್ಯತಿಥಿಯ ಅಂಗವಾಗಿ ವಿಧಾನಸೌಧದ ಆವರಣದಲ್ಲಿ ಇಂದು ಅವರ ಪ್ರತಿಮೆಯ ಬಳಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು 'ಪತ್ರ ಅಸಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ ಎಂಬ ಬಗ್ಗೆ ಉತ್ತರಿಸಿ, ರಾಮನಗರದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಕುಮಾರ್ ಅವರು ಪತ್ರವನ್ನು ಅಧಿಕಾರಿಗಳು ಬರೆದಿಲ್ಲ ಎಂದು ದೂರು ನೀಡಿದ್ದಾರೆ. ಪೊಲೀಸರಿಗೆ ತನಿಖೆ ಮಾಡಿ ಸತ್ಯ ಬಯಲಿಗೆಳೆಯುಂತೆ ಸೂಚಿಸಲಾಗಿದೆ ಎಂದರು.

ಸತ್ಯಾಸತ್ಯತೆ ತಿಳಿಯಲು ತನಿಖೆ: ಬಿಬಿಎಂಪಿ ಗುತ್ತಿಗೆದಾರರು ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಕೆಲಸ ನಿಲ್ಲಿಸಿ ರಾಜ್ಯಪಾಲರನ್ನು ಭೇಟಿ ಮಾಡುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ಕೆಲಸ ನಿಲ್ಲಿಸಿಲ್ಲ. ತನಿಖೆಯಾಗಬೇಕೆಂದು ರಾಜ್ಯಪಾಲರನ್ನು ಭೇಟಿ ಮಾಡುತ್ತಿದ್ದಾರೆ. ಬಿಬಿಎಂಪಿ, ಬಿಡಿಎನಲ್ಲಿ ಕೆಲಸಗಳಾಗಿರುವ ಬಗ್ಗೆ ಸತ್ಯಾಸತ್ಯತೆ ತಿಳಿಯಲು ತನಿಖೆ ಮಾಡಿಸಲಾಗುತ್ತಿದೆ. ಈ ಬಗ್ಗೆ ಸಮಿತಿ ರಚನೆ ಮಾಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದರು.

ಉಡುಪಿ ಪ್ರಕರಣ ಸಿಐಡಿಗೆ: ಉಡುಪಿ ವಿಡಿಯೋ ಪ್ರಕರಣವನ್ನು ಸಿಐಡಿಗೆ ವಹಿಸಿ ನಿನ್ನೆ ಆದೇಶಿಸಲಾಗಿದೆ. ಡಿವೈಎಸ್​ಪಿ ಮಟ್ಟದ ಅಧಿಕಾರಿಗೆ ತನಿಖೆ ಮಾಡಲು ಸೂಚಿಸಲಾಗಿತ್ತು. ಆದರೆ ಇನ್ನೂ ಉನ್ನತ ಮಟ್ಟದ ತನಿಖೆ ಮಾಡಬೇಕೆಂದು ಸಿಐಡಿಗೆ ವಹಿಸಲಾಗಿದೆ. ಶಾಸಕ ಯಶ್ ಪಾಲ್ ಸುವರ್ಣ ಅವರು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ಮಾಡಿದ್ದಾರೆ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಸಿಐಡಿಗೆ ಕೊಟ್ಟರೂ ಬೇಡ ಎನ್ನುತ್ತಾರೆ. ಅವರ ಕಾಲದಲ್ಲಿ ಸಿಐಡಿಗೆ ಕೊಟ್ಟಿದ್ದ ಪ್ರಕರಣಗಳು ಮುಚ್ಚಿ ಹೋಗಿವೆಯೇ ಎಂದು ಸಿಎಂ ಪ್ರಶ್ನಿಸಿದರು.

ನಿಜಲಿಂಗಪ್ಪ ದೇಶ ಕಂಡ ಮುತ್ಸದ್ಧಿ ರಾಜಕಾರಣಿ:ಇದಕ್ಕೂ ಮುನ್ನ ನಿಜಲಿಂಗಪ್ಪ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಮಾತನಾಡಿದ ಸಿಎಂ, ಎಸ್ ನಿಜಲಿಂಗಪ್ಪ ಅವರು ದೇಶ ಕಂಡ ಮುತ್ಸದ್ಧಿ ರಾಜಕಾರಣಿ ಎಂದು ಹೊಗಳಿದರು. ರಾಜ್ಯದ ಮುಖ್ಯಮಂತ್ರಿಯಾಗಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದ್ದರು. ನೀರಾವರಿಗೆ ಹೆಚ್ಚು ಆದ್ಯತೆ ನೀಡಿ, ಏಕೀಕರಣದ ನಂತರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿ ಮಾಡುವ ಇಚ್ಛಾಶಕ್ತಿಯಿಂದ ಅನೇಕ ಯೋಜನೆಗಳನ್ನು ರೂಪಿಸಿದ್ದರು ಎಂದರು.

ಅತ್ಯಂತ ಪ್ರಾಮಾಣಿಕ ರಾಜಕಾರಣಿಯಾಗಿದ್ದ ಅವರು ತಮ್ಮ ಜೀವನದುದ್ದಕ್ಕೂ ಅದನ್ನು ಕಾಪಾಡಿಕೊಂಡು ಬಂದವರು. ಧೀಮಂತ ನಾಯಕರಾಗಿದ್ದ ಅವರ ಪುಣ್ಯತಿಥಿ ಆಚರಿಸಿ ಗೌರವ ಸಲ್ಲಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಅವರ ಬದುಕು ನಮಗೆ ಮಾರ್ಗದರ್ಶನ. ನಿಜಲಿಂಗಪ್ಪನವರು ಈ ನಾಡಿಗೆ ಹಾಗೂ ದೇಶಕ್ಕೆ ಮಾಡಿದ ಸೇವೆಯನ್ನು ನಾವೆಲ್ಲರೂ ಸ್ಮರಿಸಬೇಕು ಸಿಎಂ ಹೇಳಿದರು.

ಇದನ್ನೂ ಓದಿ:ಕೃಷಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು ಪ್ರಕರಣ: ಕಾನೂನು ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ ಶಾಸಕರು, ಅಧಿಕಾರಿಗಳು

Last Updated : Aug 8, 2023, 4:40 PM IST

ABOUT THE AUTHOR

...view details