ಬೆಂಗಳೂರು : ಬಾಂಗ್ಲಾ ದೇಶದಿಂದ ನಕಲಿ ನೋಟು ತಂದು ಚಲಾವಣೆ ಮಾಡಿದ ಮೂವರು ಅಪರಾಧಿಗಳಿಗೆ 6 ವರ್ಷ ಜೈಲು ಶಿಕ್ಷೆ ಹಾಗೂ ತಲಾ 16 ಸಾವಿರ ದಂಡ ವಿಧಿಸಿ ನಗರದ ಎನ್ಐಎ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ದಲೀಮ್ ಮಿಯಾ, ಅಶೋಕ್ ಮಹದೇವ ಕುಂಬಾರ ಹಾಗೂ ಶುಕ್ರುದ್ದೀನ್ ಶೇಖ್ ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳು. ಮೊದಲಿಗೆ ಪೊಲೀಸರು ಬೆಳಗಾವಿಯ ಚಿಕ್ಕೋಡಿಯಲ್ಲಿ ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಅಶೋಕ್ ಮಹಾದೇವನನ್ನು ಬಂಧಿಸಿ, 82 ಸಾವಿರ ರೂ. ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದರು. ನಂತರ ನೋಟು ಪೂರೈಕೆ ಮಾಡುತ್ತಿದ್ದ ದಲೀಮ್ನನ್ನು ಬಂಧಿಸಿದ್ದರು.
ಇದನ್ನೂ ಓದಿ : ಡಾರ್ಕ್ ವೆಬ್ ಮೂಲಕ ಡ್ರಗ್ ಖರೀದಿ: ಆರೋಪಿಗಳಿಗೆ ಕೋರ್ಟ್ ಜಾಮೀನು
ಈ ಸಂಬಂಧ 2018ರ ಮಾರ್ಚ್ 12ರಂದು ಚಿಕ್ಕೋಡಿ ಪೊಲೀಸರು ದಾಖಲಿಸಿದ್ದ ಪ್ರಕರಣವನ್ನು ತನಿಖೆ ನಡೆಸಿದ ಎನ್ಐಎ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಅದರಂತೆ ವಿಚಾರಣೆ ನಡೆಸಿದ ಎನ್ಐಎ ವಿಶೇಷ ನ್ಯಾಯಾಲಯ, ಆರೋಪಿಗಳಿಗೆ ಶಿಕ್ಷೆ ವಿಧಿಸಿ ಆದೇಶಿಸಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾ ದೇಶದ ಸದ್ದಾಂ ಶೇಖ್ ಹಾಗೂ ಹಕೀಂ ಬೇಗ್ ಮತ್ತಿತರೆ ಆರೋಪಿಗಳ ಬಂಧನಕ್ಕೆ ತನಿಖೆ ಮುಂದುವರೆಸಿರುವುದಾಗಿ ಎನ್ಐಎ ಹೇಳಿದೆ. ಆರೋಪಿಗಳು ದೇಶದ ಅರ್ಥವ್ಯವಸ್ಥೆ ಹಾಳುಗೆಡವಲು ಬಾಂಗ್ಲಾ ಗಡಿ ಮೂಲಕ ನಕಲಿ ನೋಟುಗಳನ್ನು ತಂದು ಪ್ರಮುಖ ನಗರಗಳಲ್ಲಿ ಚಲಾವಣೆ ಮಾಡುತ್ತಿದ್ದದ್ದು,ತನಿಖೆಯಲ್ಲಿ ಬಯಲಾಗಿದೆ ಎನ್ಐಎ ತಿಳಿಸಿದೆ.