ಬೆಂಗಳೂರು:2023ರ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಬೇಕೆಂದು ಜೆಡಿಎಸ್ ನಡೆಸಿದ ಹೋರಾಟ ಕಾಂಗ್ರೆಸ್ ಅಲೆಗೆ ಕೊಚ್ಚಿ ಹೋಗಿದೆ. ಹಿಂದಿನ ಚುನಾವಣೆಗೆ ಹೋಲಿಕೆ ಮಾಡಿದರೆ ಜೆಡಿಎಸ್ ಶಾಸಕರ ಸಂಖ್ಯೆ ಅರ್ಧದಷ್ಟು ಕುಸಿದಿದೆ. ಹಳೇ ಮೈಸೂರು ಭಾಗ ಸೇರಿದಂತೆ ಹಲವು ಕಡೆ ಪಕ್ಷ ನೆಲಕಚ್ಚಿದೆ.
2013ರ ಚುನಾವಣೆಯಲ್ಲಿ ಜೆಡಿಎಸ್ 40 ಕ್ಷೇತ್ರಗಳಲ್ಲಿ ಗೆದ್ದು ಬೀಗಿತ್ತು. 2018 ರ ಚುನಾವಣೆಗೂ ಮುನ್ನ ಏಳು ಮಂದಿ ಕಾಂಗ್ರೆಸ್ ಸೇರಿದ್ದರೆ, ಮೂವರು ಬಿಜೆಪಿಗೆ ಹೋಗಿದ್ದರು. ಒಬ್ಬರು ನಿಧನರಾಗಿದ್ದರು. ಆಗ ಜೆಡಿಎಸ್ನ ಬಲ 29 ಕ್ಕೆ ಕುಸಿದಿತ್ತು.
ಈ ಸಂಕಷ್ಟದ ಸ್ಥಿತಿಯಲ್ಲಿ ಚುನಾವಣೆ ಎದುರಿಸಿದ್ದ ಜೆಡಿಎಸ್ 2018 ರಲ್ಲಿ 37 ಸ್ಥಾನಗಳನ್ನು ಗಳಿಸಿ ಮೇಲಕ್ಕೇರಿತ್ತು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಜತೆಗೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿ ಮುಖ್ಯಮಂತ್ರಿಯೂ ಆದರು. ಬಿಜೆಪಿ ಹೆಣೆದ ರಾಜಕೀಯ ತಂತ್ರಗಾರಿಕೆಗೆ ಸಮ್ಮಿಶ್ರ ಸರ್ಕಾರ ಪತನಗೊಂಡಿತು.
ಆದರೆ, ಈ ಬಾರಿಯೂ 40 ರಿಂದ 55 ಸ್ಥಾನ ಗೆದ್ದರೆ ಅತಂತ್ರ ಸ್ಥಿತಿಯ ಲಾಭ ಪಡೆದು ಸುಲಭವಾಗಿ ಅಧಿಕಾರದ ಗದ್ದುಗೆ ಏರಬಹುದು ಎಂಬ ಲೆಕ್ಕಾಚಾರ ಜೆಡಿಎಸ್ ದಾಗಿತ್ತು. ಅದಕ್ಕಾಗಿಯೇ ಒಂದು ವರ್ಷಕ್ಕೂ ಮುನ್ನವೇ ಚುನಾವಣಾ ತಯಾರಿ ಆರಂಭಿಸಿತ್ತು. ಜನತಾ ಜಲಧಾರೆ, ಪಂಚರತ್ನ ಯೋಜನೆ ಹೆಸರಿನಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಪಂಚರತ್ನ ರಥಯಾತ್ರೆ ಮೂಲಕ ಪ್ರಚಾರ ನಡೆಸಿದ್ದರು.
ಇನ್ನು ಕೊನೆ ಹಂತದಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳಿಂದ ವಲಸೆ ಬಂದವರಿಗೆ ಟಿಕೆಟ್ ನೀಡಿದ ಜೆಡಿಎಸ್, ಅದರಿಂದಲೂ ಸಾಕಷ್ಟು ಲಾಭವಾಗಬಹುದು ಎಂಬ ನಿರೀಕ್ಷೆ ಜೆಡಿಎಸ್ ಇರಿಸಿಕೊಂಡಿತ್ತು. ಒಕ್ಕಗಲಿಗರ ಪ್ರಭಾವ ಇರುವ ಕ್ಷೇತ್ರಗಳಲ್ಲಿ ತಮ್ಮ ಬಲವನ್ನು ಕಸಿಯಲು ಯಾರಿಗೂ ಸಾಧ್ಯವಾಗುವುದಿಲ್ಲವೆಂದು ಬಲವಾದ ವಿಶ್ವಾಸವೂ ದೇವೇಗೌಡರ ಕುಟುಂಬದಲ್ಲಿತ್ತು. ಆದರೆ, ಈ ಚುನಾವಣೆಯ ಫಲಿತಾಂಶ ಜೆಡಿಎಸ್ ನಾಯಕರ ಲೆಕ್ಕಾಚಾರವನ್ನೇ ಬುಡಮೇಲು ಮಾಡಿತು.
ಜೆಡಿಎಸ್ ನ ಭದ್ರಕೋಟೆಯಾಗಿದ್ದ ಮಂಡ್ಯ, ಹಾಸನ, ರಾಮನಗರ, ತುಮಕೂರು, ಕೋಲಾರ ಜಿಲ್ಲೆಗಳಲ್ಲಿ ಭಾರಿ ಹಿನ್ನೆಡೆಯಾಗಿದೆ. ದೇವೇಗೌಡರ ತವರು ಜಿಲ್ಲೆ ಹಾಸನದಲ್ಲೂ ಈ ಬಾರಿ ಜೆಡಿಎಸ್ ನ ಹಿಡಿತ ಸಡಿಲವಾಗಿದೆ. ಅಲ್ಲಿಯೂ ಜೆಡಿಎಸ್ ನಿರಾಯಾಸವಾಗಿ ಯಾವ ಕ್ಷೇತ್ರವನ್ನೂ ಗೆದ್ದಿಲ್ಲ. ಮಂಡ್ಯದಲ್ಲಿ ಜೆಡಿಎಸ್ ನ ಬಲ ತೀರಾ ಕುಗ್ಗಿದೆ. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲೂ ಹಿಂದೆ ಇದ್ದ ಎಲ್ಲ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದಕ್ಕೆ ಜೆಡಿಎಸ್ ಗೆ ಸಾಧ್ಯವಾಗಿಲ್ಲ. ಕೆಲವು ಜಿಲ್ಲೆಗಳಲ್ಲಿ ಮಾತ್ರ ಜೆಡಿಎಸ್ ಗೆ ಪ್ರಾತಿನಿಧ್ಯ ಸಿಕ್ಕಿದೆ.