ಬೆಂಗಳೂರು : ಪ್ರಸ್ತುತ ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಹಿರಿಯ ಶಾಸಕ ಉಮೇಶ್ ಕತ್ತಿ, 'ನನ್ನ ಸುದ್ದಿಗೆ ಬರಬೇಡಿ' ಎಂದು ಕೈ ಮುಗಿದ ಪ್ರಸಂಗ ವಿಧಾನಸೌಧದಲ್ಲಿ ಇಂದು ನಡೆಯಿತು.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆ ಇತ್ತು. ಸಭೆಗೆ ಹಾಜರಾಗಿ ಅರ್ಧದಲ್ಲೇ ನಿರ್ಗಮಿಸಿದ ಶಾಸಕರಾದ ಕತ್ತಿ ಹಾಗೂ ಮುರುಗೇಶ್ ನಿರಾಣಿ ಅವರನ್ನು ಬಿಜೆಪಿಯಲ್ಲಿ ಅಸಮಾಧಾನ, ರಾಜ್ಯಸಭಾ ಚುನಾವಣೆ ವಿಚಾರದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ರಾಜ್ಯಸಭಾ ಚುನಾವಣೆಯಲ್ಲಿ ನಿಮ್ಮ ಸೋದರ ರಮೇಶ್ ಕತ್ತಿ ಸ್ಪರ್ಧೆ ಮಾಡ್ತಾರಾ? ಎಂಬ ಪ್ರಶ್ನೆಗೂ ಉತ್ತರಿಸದ ಉಮೇಶ್ ಕತ್ತಿ, ಎಲ್ಲವನ್ನು ಕೇಂದ್ರದ ನಾಯಕರು ನೋಡಿಕೊಳ್ಳುತ್ತಾರೆ. ಪಕ್ಷ ತೀರ್ಮಾನ ಮಾಡುತ್ತದೆ ಎಂದಷ್ಟೇ ಹೇಳಿ ಹೊರಟರು.
ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಿಂದ ಹೊರ ನಡೆದ ಮುರುಗೇಶ್ ನಿರಾಣಿ ಮತ್ತು ಉಮೇಶ್ ಕತ್ತಿ ಅವರು, ಸಮಿತಿ ಸಭೆಯ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಬಿಜೆಪಿಯಲ್ಲಿ ಅಸಮಾಧಾನ ಇದೆಯಾ? ಎಂಬ ಪ್ರಶ್ನೆಗೆ ಗರಂ ಆದ ಮುರುಗೇಶ್ ನಿರಾಣಿ, ಯಾವ ಅಸಮಾಧಾನ ಕೂಡಾ ಇಲ್ಲ, ಎಷ್ಟು ಬಾರಿ ಹೇಳಬೇಕು ಎಂದು ಸಿಟ್ಟಾದರು.