ಬೆಂಗಳೂರು: ನನಗೆ ಸಚಿವ ಸ್ಥಾನ ಕೊಡುವುದು ರಾಷ್ಟ್ರ ಹಾಗೂ ರಾಜ್ಯ ನಾಯಕರಿಗೆ ಬಿಟ್ಟ ವಿಚಾರ. ಸಚಿವ ಸ್ಥಾನ ಕೊಟ್ಟರೆ ಒಳ್ಳೆಯದು, ಕೊಡದಿದ್ದರೆ ಯಾವುದೇ ರೀತಿಯ ಅಸಮಾಧಾನ ಇಲ್ಲವೆಂದು ಶಾಸಕ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಸಚಿವ ಸ್ಥಾನ ಕೊಟ್ಟರೆ ಒಳ್ಳೆಯದು, ಕೊಡದಿದ್ದರೆ ಅಸಮಾಧಾನವಿಲ್ಲ: ಮುರುಗೇಶ್ ನಿರಾಣಿ - ಸಚಿವ ಸ್ಥಾನ
ಸಚಿವ ಸ್ಥಾನ ಕೊಟ್ಟರೂ, ಕೊಡದಿದ್ದರೂ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ವಿಧಾನಸೌಧದಲ್ಲಿ ನಡೆದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಚಿವ ಸ್ಥಾನ ಸಿಗದಿದ್ದರೂ ಸಹ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದರು. ನಾಯಕತ್ವ ಬದಲಾವಣೆಯ ಕುರಿತು ಪ್ರತಿಕ್ರಿಯಿಸಿ, ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ಮುಂದುವರೆಯಲಿದ್ದಾರೆ. ಕೊರೊನಾ ಸಂದರ್ಭದಲ್ಲಿ ಯಾರೂ ಬದಲಾವಣೆ ಆಗುವುದಿಲ್ಲ ಎಂದು ನಿರಾಣಿ ಅಭಿಪ್ರಾಯಪಟ್ಟರು.
ಸಚಿವ ರಮೇಶ್ ಜಾರಕಿಹೊಳಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ದೆಹಲಿಗೆ ಭೇಟಿ ನೀಡಿ ನಮ್ಮ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ್ದಾರೆ. ಅವರು ಇಲಾಖಾ ಕೆಲಸದ ನಿಮಿತ್ತ ನಾಯಕರನ್ನು ಭೇಟಿ ಮಾಡಿರಬಹುದು. ರಮೇಶ್ ಜಾರಕಿಹೊಳಿಯವರಿಗೆ ಡಿಸಿಎಂ ಸ್ಥಾನದ ಆಶ್ವಾಸನೆ ಯಾರು ಕೊಟ್ಟಿದ್ದಾರೋ ಗೊತ್ತಿಲ್ಲ. ಆಶ್ವಾಸನೆ ಕೊಟ್ಟಿರುವವರು ಮತ್ತು ಪಡೆದವರಿಗೆ ಮಾತ್ರ ಗೊತ್ತು. ಅದನ್ನು ಅವರೇ ಬಗೆಹರಿಸಿಕೊಳ್ಳಬೇಕು ಎಂದು ನಿರಾಣಿ ಹೇಳಿದ್ರು.