ಬೆಂಗಳೂರು:ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣದಲ್ಲಿ ನಾದಿನಿ ಮಾಲಾ ಹಾಗೂ ಈಕೆಯ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಹತ್ಯೆ ನಡೆಸಲು ಮೂರು ತಿಂಗಳ ಹಿಂದೆ ಸಂಚು ರೂಪಿಸಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.
ಕದಿರೇಶ್ ಹತ್ಯೆ ಬಳಿಕ ರೇಖಾ ತಮ್ಮನ್ನು ಕಡೆಗಣಿಸಿದ್ದರು ಎಂಬ ಅಂಶವೇ ಕೃತ್ಯಕ್ಕೆ ಪ್ರಮುಖ ಕಾರಣವಾಗಿರುವುದು ಗೊತ್ತಾಗಿದೆ. ಬಂಧಿತ ಆರೋಪಿಗಳಾದ ಪೀಟರ್, ಸೂರ್ಯ, ಪುರುಷೋತ್ತಮ್ ಹಾಗೂ ಅರುಳ್ ಸೇರಿದಂತೆ ಆರು ಮಂದಿ ರೇಖಾ ಕೊಲೆಗೂ ಮೊದಲು ಪ್ರತ್ಯೇಕವಾಗಿ ಸಭೆ ನಡೆಸಿದ್ದರು.
ಕೃತ್ಯದ ನಂತರ ಯಾವುದೇ ಕಾರಣಕ್ಕೂ ತನ್ನ ಹೆಸರು ಬರಬಾರದು. ಆರೋಪಿಗಳಿಗೆ ಜಾಮೀನು, ಕುಟುಂಬಸ್ಥರಿಗೆ ಹಣಕಾಸಿನ ಸಹಾಯ ಮಾಡುವುದಾಗಿ ಮಾಲಾ ಭರವಸೆ ನೀಡಿದ್ದಳು. ಕೃತ್ಯ ಎಸಗಲು ಹಾಗೂ ಆರೋಪಿಗಳಿಗೆ ನೀಡಲು ಏರಿಯಾದ ಹಲವರಿಂದ ಸಾಲದ ರೂಪದಲ್ಲಿ ಮಾಲಾ ಹಣ ಪಡೆದಿದ್ದಳು ಎನ್ನಲಾಗಿದೆ.
ರೇಖಾ ಕದಿರೇಶ್ ಕೊಲೆ ಬಳಿಕ ಯಾವ ರೀತಿ ಎಸ್ಕೇಪ್ ಆಗಬೇಕು. ಪೊಲೀಸರಿಗೆ ಏನು ಹೇಳಬೇಕು ಎಂಬುವುದರ ಬಗ್ಗೆ ಆರೋಪಿಗಳು ಪ್ಲ್ಯಾನ್ ರೆಡಿ ಮಾಡಿಕೊಂಡಿದ್ದರು. ವಿಚಾರಣೆ ಎದುರಿಸುತ್ತಿರುವ ಮಾಲಾಗೆ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳೊಂದಿಗೆ ಇದ್ದ ಸಂಪರ್ಕದ ಬಗ್ಗೆ ಪೊಲೀಸರು ಪ್ರಶ್ನಿಸುತ್ತಿದ್ದಾರೆ.
ಇದನ್ನೂಓದಿ: ರೇಖಾ ಕದಿರೇಶ್ ಕೊಲೆ ಪ್ರಕರಣ : ಆರೋಪಿಗಳನ್ನ 14 ದಿನ ಕಸ್ಟಡಿಗೆ ಪಡೆದ ಪೊಲೀಸ್
ಕೊಲೆ ಮಾಡಿಸಿದ ಬಳಿಕ ಮಗುವನ್ನು ಚಿವುಟಿ ತೊಟ್ಟಿಲು ತೂಗುವ ಕೆಲಸವನ್ನು ಮಾಲಾ ಮಾಡಿದ್ದಳು. ಘಟನಾ ಸ್ಥಳದಲ್ಲಿಯೇ ಇದ್ದು, ತನಗೇನು ಗೊತ್ತಿಲ್ಲ ಎಂಬಂತೆ ನಾಟಕ ಮಾಡಿದ್ದಳು. ಕೊಲೆ ಆರೋಪವನ್ನು ಪೀಟರ್ ಮೇಲೆ ಹೊರಿಸಿದ್ದಳು.
ರೇಖಾ ಹತ್ಯೆಗೆ ಸುಪಾರಿ ನೀಡಲಾಗಿತ್ತಾ? ಒಂದು ವೇಳೆ ಸುಪಾರಿ ನೀಡಿದ್ದರೆ ಎಷ್ಟು ಲಕ್ಷಕ್ಕೆ ಡೀಲ್ ಕುದುರಿಸಲಾಗಿತ್ತು? ಹೀಗೆ, ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರೇಖಾ ಹತ್ಯೆಗೆ ಪೀಟರ್ನ ಮೈಂಡ್ ವಾಶ್ :ಮಾಲಾಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಮಗ ಆಥವಾ ಮಗಳನ್ನು ಕಣಕ್ಕಿಳಿಸುವ ಪ್ಲ್ಯಾನ್ ಮಾಡಿಕೊಂಡಿದ್ದಳು. ಅದಕ್ಕಾಗಿ, ರೇಖಾ ಮತ್ತು ಪೀಟರ್ ನಡುವಿನ ಜಗಳವನ್ನೇ ಅಸ್ತ್ರ ಮಾಡಿಕೊಂಡು, ರೇಖಾ ವಿರುದ್ಧ ಪೀಟರ್ನ ಮೈಂಡ್ ವಾಷ್ ಮಾಡಿದ್ದಳು ಎನ್ನಲಾಗ್ತಿದೆ.
ರೇಖಾ ಯಾವುದೇ ಟೆಂಡರ್ ಕಾಮಗಾರಿ ನಿನಗೆ ನೀಡುವುದಿಲ್ಲ. ಹಣಕಾಸು ವಿಚಾರದಲ್ಲೂ ನಿನ್ನನ್ನು ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಹೀಗಾಗಿ, ರೇಖಾಳಿಂದ ನಿನಗೆ ಯಾವುದೇ ಸಹಾಯ ದೊರೆಯುವುದಿಲ್ಲ. ಅವಳನ್ನು ಕೊಲೆ ಮಾಡಬೇಕು ಎಂದು ಪೀಟರ್ ಅನ್ನು ಎತ್ತಿಕಟ್ಟಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ ತನಗೂ ಕೂಡ ರೇಖಾಳ ಜೊತೆ ಕಿತ್ತಾಟವಿದ್ದ ಕಾರಣ ಹತ್ಯೆಗೆ ಪೀಟರ್ ಸೈ ಎಂದಿದ್ದಂತೆ. ಇದೇ ಕಾರಣಕ್ಕೆ ಪೀಟರ್ ಗ್ಯಾಂಗ್ನಿಂದ ರೇಖಾ ಹತ್ಯೆ ಮಾಡಿಸಿದ್ದಾಳೆ ಎಂದು ಹೇಳಲಾಗ್ತಿದೆ.