ಬೆಂಗಳೂರು :ಬೆಳ್ಳಂದೂರು ಮತ್ತು ದೇವರಬೀಸನಹಳ್ಳಿ ಗ್ರಾಮಗಳಲ್ಲಿನ ಅಕ್ರಮ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಅಕ್ರಮ ಡಿನೋಟಿಫಿಕೇಶನ್ ಕುರಿತಂತೆ ಬೆಳ್ಳಂದೂರು ನಿವಾಸಿ ವಾಸುದೇವ ರೆಡ್ಡಿ ದೂರು ಸಲ್ಲಿಸಿದ್ದರು.
ಶನಿವಾರ ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ವಕೀಲ ಸಿ.ವಿ.ನಾಗೇಶ್ ಅವರೊಂದಿಗೆ ಖುದ್ದಾಗಿ ಹಾಜರಾದ ಯಡಿಯೂರಪ್ಪ ಜಾಮೀನು ಮಂಜೂರು ಮಾಡುವಂತೆ ಕೋರ್ಟ್ಗೆ ಮನವಿ ಮಾಡಿದರು. ಈ ಮನವಿಗೆ ದೂರುದಾರರ ಪರ ವಾದಿಸಿದ ವಕೀಲ ಧನಂಜಯ್, 'ಜಾಮೀನು ನೀಡಲು ತಮ್ಮ ವಿರೋಧವಿಲ್ಲ. ಆದರೆ, ಜಾಮೀನು ಮಂಜೂರು ಮಾಡುವುದಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪನವರು ಉಲ್ಲೇಖಿಸಿರುವ ಕೆಲವು ಹೇಳಿಕೆಗಳಿಗೆ ವಿರೋಧವಿದೆ' ಎಂದು ಆಕ್ಷೇಪಣೆ ಸಲ್ಲಿಸಿದರು.
ಆಗ ಯಡಿಯೂರಪ್ಪ ಪರ ವಕೀಲ ನಾಗೇಶ್ ವಾದಿಸಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಆರೋಪಿಸಲಾಗಿಲ್ಲ. ಈ ಪ್ರಕರಣದಲ್ಲಿ ಬಿ-ರಿಪೋರ್ಟ್ ವರದಿ ತಿರಸ್ಕರಿಸಿ, ಖಾಸಗಿ ದೂರನ್ನು ಆಧರಿಸಿ ನ್ಯಾಯಾಲಯವು ಸಂಜ್ಞೆ ಪರಿಗಣಿಸಿ, ಸಮನ್ಸ್ ಜಾರಿ ಮಾಡಿದೆ. ಇದರಂತೆ ನ್ಯಾಯಾಲಯದ ಮುಂದೆ ಹಾಜರಾಗಿರುವುದರಿಂದ ಅವರನ್ನು ವಶಕ್ಕೆ ಪಡೆಯುವ ಅಗತ್ಯವಿಲ್ಲ. ತಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಅಲ್ಲದೇ, ಈ ಪ್ರಕರಣದಲ್ಲಿ ಮಾಡಲಾಗಿರುವ ಆರೋಪವು ದೋಷಪೂರಿತ ಮತ್ತು ಕಟ್ಟುಕತೆಯಾಗಿದೆ. ದೂರುದಾರರು ಆರೋಪಿಸಿರುವಂತೆ ಯಾವುದೇ ಅಪರಾಧದಲ್ಲಿ ಯಡಿಯೂರಪ್ಪ ಭಾಗಿಯಾಗಿಲ್ಲ. ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 13(1)(ಡಿ) ಅಡಿ ಅಪರಾಧ ಎಸಗಿರುವುದಕ್ಕೆ ಯಾವುದೇ ದಾಖಲೆಗಳು ಇಲ್ಲ. ಹಾಗೆಯೇ, ಆರೋಪಿಸಲಾಗಿರುವ ಅಪರಾಧವು ಜೀವಾವಧಿ ಅಥವಾ ಮರಣ ದಂಡನೆ ವಿಧಿಸುವ ಶಿಕ್ಷೆ ಒಳಗೊಂಡಿಲ್ಲ ಎಂದು ವಾದಿಸಿದರು.
ಅಲ್ಲದೇ, ಜಾಮೀನು ನೀಡಲು ದೂರುದಾರರ ವಿರೋಧವೂ ಇಲ್ಲದ್ದರಿಂದ ಹಾಗೂ ನ್ಯಾಯಾಲಯ ವಿಧಿಸುವ ಷರತ್ತುಗಳಿಗೆ ಯಡಿಯೂರಪ್ಪನವರು ಬದ್ಧವಾಗಿರಲು ಸಿದ್ಧವಾಗಿರುವುದರಿಂದ ಜಾಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಿದರು. ನ್ಯಾಯಾಲಯ ಇದನ್ನು ಪುರಸ್ಕರಿಸಿ ಜಾಮೀನನ್ನು ಮಂಜೂರು ಮಾಡಿ ವಿಚಾರಣೆ ಮುಂದೂಡಿದೆ.
ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ 2006ರ ಜೂನ್ 21ರಂದು ಸರ್ಕಾರಿ ಅಧಿಸೂಚನೆಯ ಮೂಲಕ ಬೆಳ್ಳಂದೂರು ಮತ್ತು ದೇವರಬೀಸನಹಳ್ಳಿ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡಿದ್ದ 15.30 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಆರ್.ವಿ.ದೇಶಪಾಂಡೆ ಅವರನ್ನು ಪ್ರಥಮ ಆರೋಪಿಯನ್ನಾಗಿಯೂ, ಬಿ.ಎಸ್.ಯಡಿಯೂರಪ್ಪ ಅವರನ್ನು ಎರಡನೇ ಆರೋಪಿಯನ್ನಾಗಿಯೂ ಉಲ್ಲೇಖಿಸಿ ಒಟ್ಟು ಹತ್ತು ಮಂದಿಯ ವಿರುದ್ಧ ವಾಸುದೇವ ರೆಡ್ಡಿ ದಾವೆ ಹೂಡಿದ್ದರು.
ಇದನ್ನೂ ಓದಿ:ಪ್ರಧಾನಿ ಮೋದಿ ಬೆಂಗಳೂರು ರೋಡ್ ಶೋ ರದ್ದು: ವಾಯು ಮಾರ್ಗದಲ್ಲೇ ಸಂಚಾರ