ಬೆಂಗಳೂರು:ಹೈಕೋರ್ಟ್ ಆದೇಶವನ್ನು ಅಕ್ಷರಶಃ ಪಾಲಿಸಬೇಕು. ಯಾವುದೇ ಅಹಿತಕರ ಘಟನೆಯಾಗದಂತೆ ಕಟ್ಟೆಚ್ಚರದಲ್ಲಿ ಇರುವಂತೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಸಿಎಂ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಎಲ್ಲ ಡಿಸಿಗಳು, ಎಸ್ಪಿಪಿಗಳು, ಸಿಇಒ, ಶಿಕ್ಷಣ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತಮಾಡಿದ ಅವರು, ಪರಿಸ್ಥಿತಿಯ ಅವಲೋಕನ ಮಾಡಲಾಗಿದೆ. ಸೋಮವಾರದಿಂದ ಶಾಲೆಗಳು ಪ್ರಾರಂಭವಾಗುತ್ತದೆ. ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಸೂಕ್ಷ್ಮ ಪ್ರದೇಶಗಳ ಶಾಲೆಗಳಿಗೆ ಎಸ್ಪಿ, ಡಿಸಿಗಳು ಭೇಟಿ ನೀಡಲು ಸೂಚನೆ ನೀಡಲಾಗಿದೆ ಎಂದರು.
ಡಿಡಿಪಿಐಗಳು ನಿರಂತರ ಸಂಪರ್ಕದಲ್ಲಿ ಇರಬೇಕು. ಸಣ್ಣ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಹೊರಗಿನ ಪ್ರಚೋದನೆಗೆ ಒಳಗಾಗದಂತೆ ಕ್ರಮ ವಹಿಸಬೇಕು. ಎಲ್ಲ ಅಧಿಕಾರಿಗಳು ಫೀಲ್ಡ್‌ನಲ್ಲಿ ಇರಬೇಕು. ತಪ್ಪಿತಸ್ಥ ರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹೈಕೋರ್ಟ್ ಆದೇಶ ಪಾಲನೆ ಮಾಡುವಂತೆ ನಿರ್ದೇಶನ ನೀಡಲಾಗಿದೆ. ಧಾರ್ಮಿಕ ಗುರುಗಳು, ಶಾಸಕರುಗಳ ಜೊತೆ ಸಭೆ ನಡೆಸುವಂತೆ ಸೂಚಿಸಲಾಗಿದೆ.
ಸಾಮಾಜಿಕ ಜಾಲಾತಾಣದಲ್ಲಿ ಪ್ರಚೋದನಾಕರಿ ವಿಡಿಯೋ ಹರಿದಾಡದಂತೆ ಕಟ್ಟೆಚ್ಚರ ವಹಿಸಬೇಕು. ಸಮಾಜಘಾತುಕ ಶಕ್ತಿಗಳನ್ನು ಗುರುತಿಸಬೇಕು. ಮೇಲಿನ ಆದೇಶಕ್ಕೆ ಕಾಯದೇ ತಕ್ಷಣದ ಕ್ರಮ ಪಾಲಿಸಲು ಆಡಳಿತಕ್ಕೆ ಆದೇಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಪೋಷಕರು, ಶಾಲಾ ಆಡಳಿತ ಮಂಡಳಿ ಜೊತೆ ಜಿಲ್ಲಾಧಿಕಾರಿಗಳು ನಿರಂತರ ಸಭೆ ನಡೆಸಬೇಕು. ಶಾಂತಿಪಾಲನ ಸಭೆ ನಡೆಸಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಕ್ರಮ ವಹಿಸಲು ಸೂಚಿಸಲಾಗಿದೆ. ಮಾಧ್ಯಮಗಳಿಗೆ ವಸ್ತುಸ್ಥಿತಿ ವಿವರಿಸುವ ಕೆಲಸ ಆಗಬೇಕು. ಮಾಧ್ಯಮಗಳು ಹಳೆ ಘಟನೆಯನ್ನು ಮತ್ತೆ ಮತ್ತೆ ತೋರಿಸುವುದು ನಡೆದಿದೆ. ಈಗ ಎಲ್ಲವೂ ಶಾಂತಿಯುತವಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಪರಿಸ್ಥಿತಿ ಗಮನಿಸಿ ಕಾಲೇಜು ಪ್ರಾರಂಭಿಸಲು ನಿರ್ಧಾರ ಕೈಗೊಳ್ಳಲಾಗುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳು, ಪೋಷಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು ಎಂದರು.
ಮತೀಯ ಸಂಘಟನೆ ಘಟನೆ ಹಿಂದಿರುವ ಗುಮಾನಿ:ಮತೀಯ ಸಂಘಟನೆ ಗಲಾಟೆ ಹಿಂದೆ ಇದೆ ಎಂಬ ಅರಿವಿದೆ. ಅದರ ಬಗ್ಗೆ ತನಿಖೆ ನಡೆಯುತ್ತಿದೆ. ಆದ್ಯತೆಯ ಮೇರೆಗೆ ಕಾನೂನು ಕಾಪಾಡಿಕೊಂಡು ಹೋಗಬೇಕು. ಹೊರಗಿನ ಶಕ್ತಿಗಳಿಗೆ ಅವಕಾಶ ಕೊಡಬಾರದು ಎಂದರು.
ಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಗುಪ್ತಚರ ಇಲಾಖೆ ಎಡಿಜಿಪಿ ದಯಾನಂದ, ಗೃಹ ಇಲಾಖೆ ಎಸಿಎಸ್ ರಜನೀಶ ಗೋಯಲ್, ಶಿಕ್ಷಣ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್ ಭಾಗಿಯಾಗಿದ್ದರು.
ಇದನ್ನೂ ಓದಿ: ಪದವಿ, ವಿವಿ, ಡಿಪ್ಲೋಮಾ ಕಾಲೇಜುಗಳಿಗೆ ಫೆ.16ರವರೆಗೆ ರಜೆ ಘೋಷಿಸಿದ ಸರ್ಕಾರ