ಕರ್ನಾಟಕ

karnataka

ETV Bharat / state

ಕ್ಷೇತ್ರ ಪುನರ್ವಿಂಗಡನೆ ಆಯೋಗ ರಚನೆ : ಪ್ರತಿಪಕ್ಷ ಸದಸ್ಯರಿಗೆ ಎದುರಾಗಿರುವ ಆತಂಕ ಏನು?

ಈ ಕಾಯ್ದೆ ಮೂಲಕ ಕ್ಷೇತ್ರ ಮೀಸಲಾತಿಯನ್ನೂ ನಿಗದಿಗೊಳಿಸಬಹುದಾಗಿದೆ.‌ ಇದರಿಂದ ಬಿಜೆಪಿ ಸರ್ಕಾರ ತಮ್ಮ ಅನುಕೂಲಕ್ಕೆ ತಕ್ಕಂತೆ ಮೀಸಲು ಕ್ಷೇತ್ರ ನಿಗದಿಪಡಿಸುವ ಆತಂಕ ಜೆಡಿಎಸ್ ಪಕ್ಷದ ಸದಸ್ಯರದ್ದಾಗಿದೆ. ಆ ಮೂಲಕ ರಾಜಕೀಯವಾಗಿ ಆಯೋಗವನ್ನು ದುರುಪಯೋಗಪಡಿಸುವ ಸಾಧ್ಯತೆ ಹೆಚ್ಚಿದೆ ಎಂಬುದು ಪ್ರತಿಪಕ್ಷಗಳ ಆರೋಪ..

Field Redistribution Commission
ಕ್ಷೇತ್ರ ಪುನರ್ವಿಂಗಡನೆ ಆಯೋಗ ರಚನೆ

By

Published : Sep 19, 2021, 4:55 PM IST

ಬೆಂಗಳೂರು :ಶುಕ್ರವಾರವಷ್ಟೇ ವಿಧಾನಮಂಡಲದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕಕ್ಕೆ ಅಂಗೀಕಾರ ಸಿಕ್ಕಿತ್ತು. ಅದರಂತೆ ಕ್ಷೇತ್ರ ಪುನರ್ವಿಂಗಡನೆ ಆಯೋಗ ರಚಿಸಿ ಸರ್ಕಾರ ಅಧಿಕೃತ ಆದೇಶವನ್ನೂ ಹೊರಡಿಸಿದೆ. ಕಾಂಗ್ರೆಸ್​ನ ತೀವ್ರ ವಿರೋಧದ ಮಧ್ಯೆ ಈ ತಿದ್ದುಪಡಿ ಕಾಯ್ದೆ ಜಾರಿಯಾಗುತ್ತಿದೆ.‌

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಕಾಯ್ದೆ ಅಂದರೆ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಕ್ಷೇತ್ರ ಪುನರ್ವಿಂಗಡನೆ ಆಯೋಗ ರಚಿಸುವಾಗಿನ ಮಹತ್ವದ ಕಾಯ್ದೆ ಇದಾಗಿದೆ.

ಚಾಲ್ತಿಯಲ್ಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್ ಸದಸ್ಯರ ತೀವ್ರ ವಿರೋಧ, ಸಭಾತ್ಯಾಗದ ಮಧ್ಯೆ ವಿಧೇಯಕಕ್ಕೆ ಅಂಗೀಕಾರ ಸಿಕ್ಕಿತ್ತು.‌ ಶುಕ್ರವಾರ ವಿಧೇಯಕ ಮೇಲ್ಮನೆಯಲ್ಲೂ ಅಂಗೀಕೃತಗೊಂಡಿತ್ತು. ಶನಿವಾರ ಈ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತವೂ ಸಿಕ್ಕಿದ್ದು ಇದೀಗ ಕಾಯ್ದೆಯಾಗಿ ಜಾರಿಯಾಗಲಿದೆ.

ಈ ವಿಧೇಯಕಕ್ಕೆ ಕಾಂಗ್ರೆಸ್ ಪಕ್ಷ ಉಭಯ ಸದನಗಳಲ್ಲೂ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ತಾಪಂ ಹಾಗೂ ಜಿಪಂ ಚುನಾವಣೆ ಮುಂದೂಡುವ ಏಕೈಕ ಉದ್ದೇಶದಿಂದ ವಿಧೇಯಕ ತರಲಾಗುತ್ತಿದೆ.‌ ಇದರಿಂದ ಉದ್ದೇಶ ಈಡೇರುವುದಿಲ್ಲ ಎಂದು ಕಾಂಗ್ರೆಸ್ ‌ಬಲವಾಗಿ ಆಕ್ಷೇಪ ವ್ಯಕ್ತಪಡಿಸಿ, ಸಭಾತ್ಯಾಗ ಮಾಡಿತ್ತು.

ಇತ್ತ ಜೆಡಿಎಸ್ ಸದಸ್ಯರೂ ವಿಧೇಯಕದ‌ ಬಗ್ಗೆ ಕೆಲ ಆತಂಕವನ್ನು ವ್ಯಕ್ತಪಡಿಸಿದರಾದರೂ, ವಿಧೇಯಕವನ್ನು ಮತಕ್ಕೆ ಹಾಕುವ ವೇಳೆ ಯಾವುದೇ ವಿರೋಧ ವ್ಯಕ್ತಪಡಿಸದೆ ತಟಸ್ಥವಾಗಿತ್ತು. ಹೀಗಾಗಿ, ವಿಧೇಯಕ ಉಭಯ ಸದನಗಳಲ್ಲಿ ಅಂಗೀಕೃತಗೊಂಡಿತು.

ವಿಧೇಯಕ ತರಲು ಸರ್ಕಾರ ಕೊಟ್ಟ ಕಾರಣ ಏನು?:ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಪುನರ್ವಿಂಗಡನೆ ಸಂಬಂಧ ಡಿಮಿಲಿಟೇಷನ್ ಕಮಿಷನ್ ರಚಿಸುವುದು ಈ ವಿಧೇಯಕದ ಮೂಲ ಉದ್ದೇಶ. ಈ ಮುಂಚೆ ಚುನಾವಣಾ ಆಯೋಗವೇ ಕ್ಷೇತ್ರ ಪುನರ್ವಿಂಗಡನೆ ಕಾರ್ಯವನ್ನು ಮಾಡುತ್ತಿತ್ತು. ಆದರೆ, ಇದೀಗ ಪ್ರತ್ಯೇಕ ಡಿಲಿಮಿಟೇಷನ್ ಕಮಿಷನ್ ರಚನೆ‌ ಮಾಡುವ ಮೂಲಕ ಚುನಾವಣೆ ಆಯೋಗದಿಂದ ಆ ಜವಾಬ್ದಾರಿಯನ್ನು ಹಿಂಪಡೆಯಲಾಗಿದೆ.

ಚುನಾವಣಾ ಆಯೋಗ ಮಾಡಿದ ತಾಪಂ, ಜಿಪಂ ಕ್ಷೇತ್ರ ಪುನರ್ವಿಂಗಡನೆ ಬಗ್ಗೆ ಆಕ್ಷೇಪಣೆಯನ್ನೇ ಆಲಿಸಿರಲಿಲ್ಲ‌‌. ಈ ಹಿಂದೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಮಾಡಿದ ತಾಪಂ ಹಾಗೂ ಜಿಪಂ ಸೀಮಾ ನಿರ್ಣಯ (ಕ್ಷೇತ್ರ ಪುನರ್ವಿಂಗಡನೆ) ಅವೈಜ್ಞಾನಿಕ ಹಾಗೂ ಕಾನೂನು ಬಾಹಿರವಾಗಿದೆ ಎಂದು ಆಕ್ಷೇಪಿಸಿ ಹೈಕೋರ್ಟ್​ನಲ್ಲಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿವೆ. ಇದನ್ನು ಸರಿಪಡಿಸುವ ಹಿನ್ನೆಲೆ ಕ್ಷೇತ್ರ ಪುನರ್ವಿಂಗಡನೆ ಆಯೋಗ ರಚನೆಗಾಗಿ ಕಾಯ್ದೆನ್ನು ತರಲಾಗಿದೆ.

ಡಿಲಿಮಿಟೇಷನ್ ಆಯೋಗದ ಮೂಲಕ ಡಿಸಿ ಲೆವೆಲ್‌ನಲ್ಲಿ ತಕರಾರು ಹಾಗೂ ಆಯೋಗ ಮಟ್ಟದಲ್ಲಿ ತಕರಾರು ತೆಗೆಯಲು ಅವಕಾಶ ನೀಡಲಾಗುತ್ತದೆ. ಈ ಮುಂಚಿನ ವ್ಯವಸ್ಥೆಯಲ್ಲಿ ಆ ಅವಕಾಶ ಇದ್ದಿಲ್ಲ. ಒಂದು ವೇಳೆ ಕೋರ್ಟ್ ಅನುಮತಿ ನೀಡದರೆ, ಮತ್ತೆ ಹೊಸದಾಗಿ ಆಯೋಗದ ಮೂಲಕ ಕ್ಷೇತ್ರ ಪುನರ್ವಿಂಗಡನೆ ಮಾಡುತ್ತೇವೆ ಎಂಬುದು ಸರ್ಕಾರದ ಸಮರ್ಥನೆ.

ಕಾಯ್ದೆ ಜಾರಿಯಿಂದ ಎದುರಾಗಿರುವ ಆತಂಕ ಏನು?:ಈ ಕಾಯ್ದೆಯನ್ನು ರಾಜಕೀಯ ಉದ್ದೇಶಕ್ಕಾಗಿ ದುರುಪಯೋಗ ಪಡಿಸಲಾಗುತ್ತದೆ ಎಂಬುದು ಪ್ರತಿಪಕ್ಷಗಳ ಪ್ರಮುಖ ಆರೋಪವಾಗಿದೆ. ಕ್ಷೇತ್ರ ಪುನರ್ವಿಂಗಡನೆ ಆಯೋಗ ರಚಿಸುವ ಮೂಲಕ ಸರ್ಕಾರ ತಾಪಂ ಹಾಗೂ ಜಿಪಂ ಚುನಾವಣೆ ಮುಂದೂಡಲು ಮುಂದಾಗಿದೆ ಎಂದು ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದರಲ್ಲಿ ಬೇರೆ ಯಾವುದೇ ಉದ್ದೇಶ ಈಡೇರುವುದಿಲ್ಲ ಎಂಬುದು ಕಾಂಗ್ರೆಸ್ ವಾದ.

ಈ ಕಾಯ್ದೆ ಮೂಲಕ ಕ್ಷೇತ್ರ ಮೀಸಲಾತಿಯನ್ನೂ ನಿಗದಿಗೊಳಿಸಬಹುದಾಗಿದೆ.‌ ಇದರಿಂದ ಬಿಜೆಪಿ ಸರ್ಕಾರ ತಮ್ಮ ಅನುಕೂಲಕ್ಕೆ ತಕ್ಕಂತೆ ಮೀಸಲು ಕ್ಷೇತ್ರ ನಿಗದಿಪಡಿಸುವ ಆತಂಕ ಜೆಡಿಎಸ್ ಪಕ್ಷದ ಸದಸ್ಯರದ್ದಾಗಿದೆ. ಆ ಮೂಲಕ ರಾಜಕೀಯವಾಗಿ ಆಯೋಗವನ್ನು ದುರುಪಯೋಗಪಡಿಸುವ ಸಾಧ್ಯತೆ ಹೆಚ್ಚಿದೆ ಎಂಬುದು ಪ್ರತಿಪಕ್ಷಗಳ ಆರೋಪ.

ಆಯೋಗ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ.‌ ತಮ್ಮ ರಾಜಕೀಯ ಉದ್ದೇಶಕ್ಕನುಸಾರವಾಗಿ ಆಯೋಗದ ಮೇಲೆ ಸರ್ಕಾರ ಒತ್ತಡ ಹೇರುವ ಸಾಧ್ಯತೆ ಹೆಚ್ಚಿದೆ. ಇದರಿಂದ ಕ್ಷೇತ್ರ ಪುನರ್ವಿಂಗಡನೆಯ ಲೋಪ ಸರಿಯಾಗುವುದಿಲ್ಲ.‌ ಬದಲಿಗೆ ಮತ್ತಷ್ಟು ಗೊಂದಲ, ಸಮಸ್ಯೆಗಳು ಉಂಟಾಗಲಿದೆ ಎಂಬುದು ಪ್ರತಿಪಕ್ಷಗಳ ಗಂಭೀರ ಆರೋಪ.

For All Latest Updates

ABOUT THE AUTHOR

...view details