ಬೆಂಗಳೂರು: ಈ ಹಿಂದೆ ಭಾಷಣ ಮಾಡುವಾಗ ಆಕ್ಟ್ ಆಫ್ ಗಾಡ್ ಪದದ ಮೂಲಕ ಕಾಂಗ್ರೆಸ್ನ್ನು ಲೇವಡಿ ಮಾಡಿದ್ದ ನರೇಂದ್ರ ಮೋದಿಗೆ ಇದೀಗ ಅದೇ ಪದ ವ್ಯಂಗ್ಯ ರೂಪದಲ್ಲಿ ಮರಳಿದೆ.
ಕಾಂಗ್ರೆಸನ್ನು ಅವಹೇಳನ ಮಾಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸಿಗರದ್ದು ಆಕ್ಟ್ ಆಫ್ ಗಾಡ್ ಅಲ್ಲ, ಆಕ್ಟ್ ಆಫ್ ಫ್ರಾಡ್ ಎಂದು ಹೇಳಿದ್ದರು. ಇದೀಗ ಅದೇ ವಿಡಿಯೋವನ್ನು ಬಳಸಿಕೊಂಡು ಟ್ವೀಟ್ ಮಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, 'ನಾವು ಹೇಳಿದ್ರೆ ಆರೋಪ. ನಿಮಗೆ ನೀವೇ ಹೇಳಿಕೊಂಡರೆ ಆನಂದನಾ??? ನೀವಾಡಿದ ಮಾತು ನಿಮಗೆ ನೆನೆಪಿಸುತ್ತಿದ್ದೇವೆ ಅಷ್ಟೇ ಸರ್' ಎಂದು ಕಾಲೆಳೆದಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕೂಡ ಆಕ್ಟ್ ಆಫ್ ಗಾಡ್ ವಿಚಾರ ಪ್ರಸ್ತಾಪಿಸಿದೆ. ದೇವರ ಆಟ vs ಮೋದಿ ಚೆಲ್ಲಾಟ ಎಂದು ಹೇಳಿರುವ ಪಕ್ಷ ಇದಕ್ಕೆ ಕಾರಣವಾಗಿ ಅವೈಜ್ಞಾನಿಕ ಜಿಎಸ್ಟಿ ಜಾರಿ, ನೋಟು ರದ್ದತಿ, ಸಾರ್ವಜನಿಕ ವಲಯಗಳ ಖಾಸಗೀಕರಣ, ಕೊರೊನಾ ಗಂಭೀರತೆ ಮರೆತು ನಮಸ್ತೆ ಟ್ರಂಪ್ ಕಾರ್ಯಕ್ರಮ, ಆರ್ಥಿಕತೆ ಕುಸಿಯುತ್ತಿದ್ದ ಹೊತ್ತಲ್ಲಿ ಅವೈಜ್ಞಾನಿಕ ಲಾಕ್ಡೌನ್, ಜಿಎಸ್ಟಿ ಪರಿಹಾರ ಕಡಿತ ಹಾಗೂ ಕೈಗಾರಿಕೆಗಳಿಗೆ ಬೋಗಸ್ ಪ್ಯಾಕೇಜ್ಗಳ ಉದಾಹರಣೆಯನ್ನು ನೀಡಿದೆ.
ರಾಜ್ಯಕ್ಕೆ ಜಿಎಸ್ಟಿ ಪರಿಹಾರದ ಪಾಲು ನೀಡುವಲ್ಲಿ ಹಿಂದೇಟು ಹಾಕಿರುವ ಕೇಂದ್ರ ಸರ್ಕಾರ ಇದೀಗ ರಾಜ್ಯ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದು ದಿನಕ್ಕೊಂದು ರೀತಿ ಟೀಕೆಗೆ ಒಳಗಾಗುತ್ತಿದೆ.