ಬೆಂಗಳೂರು: 10 ದಿನಗಳಲ್ಲಿ ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಜಾರಿಗೆ ತರಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಎಫ್ಕೆಸಿಸಿಐ ಕಚೇರಿಯ ಸಭಾಂಗಣದಲ್ಲಿ ಹೇಳಿದರು.
ಎಫ್ಕೆಸಿಸಿಐನಲ್ಲಿ ಆಯೋಜಿಸಲಾಗಿದ್ದ ಭೂ ಸುಧಾರಣಾ ತಿದ್ದುಪಡಿ ಸಂವಾದದಲ್ಲಿ ಮಾತನಾಡಿದ ಅವರು, ಹತ್ತು ದಿನಗಳ ನಂತರ ಕಾಯ್ದೆ ಕೈಗಾರಿಕೋದ್ಯಮಿಗಳ ಬಳಕೆಗೆ ಸಿದ್ಧವಾಗಲಿದೆ. ಭೂ ಪರಿವರ್ತನೆಯ ನಿಯಮಗಳನ್ನು ಸರಳೀಕರಣ ಮಾಡಲು ಚಿಂತನೆ ನಡೆದಿದೆ. ಮುಂದೆಯೂ ದೊಡ್ಡ ಸುಧಾರಣಾ ಕ್ರಮಗಳನ್ನು ಸರ್ಕಾರ ಮಾಡಲಿದೆ ಎಂದರು.
ಈ ಕಾಯ್ದೆಯನ್ನು ಬದಲಾವಣೆ ಮಾಡಲು 20 ವರ್ಷಗಳ ಹಿಂದಿನಿಂದ ಬೇಡಿಕೆ ಸಲ್ಲಿಕೆಯಾಗಿದೆ. ಈಗ ನಮ್ಮ ಅವಧಿಯಲ್ಲಿ ಭೂಸುಧಾರಣಾ ಕಾಯ್ದೆಯ ಸೆಕ್ಷನ್ 79 ಎ,ಬಿ,ಸಿ ತೆಗೆದು ಹಾಕಿದ್ದೇವೆ. ಭೂಸುಧಾರಣಾ ಕಾಯ್ದೆ ಜಾರಿಯಾದ 1974 ರಿಂದ ಈವರೆಗೂ ಉಲ್ಲಂಘನೆಗೆ ಸಂಬಂಧಿಸಿದಂತೆ ಸುಮಾರು 83 ಸಾವಿರ ಪ್ರಕರಣಗಳು ದಾಖಲಾಗಿವೆ. 1.76 ಲಕ್ಷ ಎಕರೆಯನ್ನು ವಾಪಸ್ ಪಡೆಯಬೇಕಿದೆ. ಆದರೆ ಒಂದು ಎಕರೆಯನ್ನು ವಾಪಸ್ ಪಡೆದಿಲ್ಲ. ಅಧಿಕಾರಿಗಳು ಲಂಚ ಪಡೆಯಲು, ಜನ ಸಾಮಾನ್ಯರಿಗೆ ಕಿರುಕುಳ ನೀಡಲು ಕಾಯ್ದೆ ದುರ್ಬಳಕೆಯಾಗುತ್ತಿತ್ತು. ಇದಕ್ಕೆ ಬದಲಾವಣೆ ಮಾಡಿದ್ದೇವೆ ಎಂದು ತಿಳಿಸಿದರು.
ಭೂ ಸುಧಾರಣಾ ತಿದ್ದುಪಡಿ ಸಂವಾದದಲ್ಲಿ ಮಾತನಾಡಿದ ಸಚಿವ ಆರ್. ಅಶೋಕ್ ಸಂವಾದದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಇಂದು ನಡೆದ ಸಂವಾದದಲ್ಲಿ ಎಫ್ಕೆಸಿಸಿಐ ಸದಸ್ಯರು ಭೂ ಸುಧಾರಣಾ ಕಾಯ್ದೆಯ 75 ಎ,ಬಿ ತೆಗೆದಿರುವ ಕುರಿತು ಸ್ವಾಗತಿಸಿದ್ದು, ಸರ್ಕಾರದ ಈ ನಿರ್ಧಾರದಿಂದ ಗ್ರಾಮಗಳತ್ತ ಉದ್ಯಮಗಳು ಬರುತ್ತವೆ ಎಂದು ಅಭಿಪ್ರಾಯಪಟ್ಟರು.
ಮತ್ತಷ್ಟು ಸುಧಾರಣಾ ಕ್ರಮಗಳಿಂದ ಪಕ್ಕದ ರಾಜ್ಯಗಳಾದ ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ಜೊತೆಗೆ ಸ್ಪರ್ಧೆ ಮಾಡಿ ಮುಂಚೂಣಿಯಲ್ಲಿ ಇರಬೇಕು ಎಂದರು. ನಾವು ಉದ್ಯಮಿದಾರರು ಅಷ್ಟೇ ಅಲ್ಲದೆ ರೈತರೊಂದಿಗೆ ಸಮಾಲೋಚನೆ ನಡೆಸುತ್ತೇವೆ. ಕೋವಿಡ್ ಸಂದರ್ಭದಲ್ಲಿ ಕಂದಾಯ ತೆರಿಗೆ ವಿನಾಯಿತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಸಚಿವರು ಕಾದು ನೋಡಿ ಎಂದು ತಿಳಿಸಿದರು.