ಕರ್ನಾಟಕ

karnataka

ಹಿಂದಿನ ಸರ್ಕಾರಗಳ ತಪ್ಪು ನಿರ್ಧಾರದಿಂದ ಗ್ರಾಹಕರ ಮೇಲೆ ವಿದ್ಯುತ್ ದರ ಏರಿಕೆ ಹೊರೆ: ಹೆಚ್​ಡಿಕೆ ಅಸಮಾಧಾನ

By

Published : Jul 12, 2023, 6:59 PM IST

''ಹಿಂದಿನ ಸರ್ಕಾರಗಳ ತಪ್ಪು ನಿರ್ಧಾರದಿಂದ ವಿದ್ಯುತ್ ಬೆಲೆ ಏರಿಕೆ ಹೊರೆ ಗ್ರಾಹಕರ ಮೇಲೆ ಬಿದ್ದಿದೆ'' ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

Former Chief Minister HD Kumaraswamy
ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು:''ಹಿಂದಿನ ಸರ್ಕಾರಗಳ ತಪ್ಪು ನಿರ್ಧಾರದಿಂದಾಗಿ ಗ್ರಾಹಕರು ವಿದ್ಯುತ್ ದರ ಏರಿಕೆಯ ಹೊರೆಯನ್ನು ಅನುಭವಿಸುವಂತಾಗಿದೆ'' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಕುರಿತು ಚರ್ಚೆಯಲ್ಲಿ ಭಾಗವಹಿಸಿದ ಅವರು, ''ಉಚಿತ ವಿದ್ಯುತ್ ಯೋಜನೆ ಸಮರ್ಪಕವಾಗಿ ಜಾರಿಗೊಳ್ಳದೇ ಇದ್ದರೆ ಯೋಜನೆಯಿಂದ ಹೊರಗುಳಿಯುವ ಗ್ರಾಹಕರು ದರ ಏರಿಕೆಯ ಹಿನ್ನೆಲೆಯಲ್ಲಿ ಬಿಲ್ ಪಾವತಿಸಲು ಕಷ್ಟಸಾಧ್ಯವಾಗಲಿದೆ'' ಎಂದು ಎಚ್ಚರಿಸಿದರು.

''ಕೋವಿಡ್‍ನಿಂದ ಸುಧಾರಿಸಿಕೊಂಡಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ದುಬಾರಿ ವಿದ್ಯುತ್ ಶುಲ್ಕ ಪಾವತಿಸಲಾಗದೇ ಮುಚ್ಚಿ ಹೋಗುವ ಪರಿಸ್ಥಿತಿ ಬರಬಹುದು. ರಾಜ್ಯದಲ್ಲಿ ನಿರುದ್ಯೋಗ ಹೆಚ್ಚಾಗಬಹುದು. ರಾಜ್ಯದಲ್ಲಿ 31,905 ಮೆಗಾ ವ್ಯಾಟ್ ವಿದ್ಯುತ್ ಸಾಮರ್ಥ್ಯವಿದೆ. ಈ ಹಿಂದೆ 2007-08ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ವಿದ್ಯುತ್ ಖರೀದಿಯಲ್ಲಿ ಜಾಣತನದ ನಡೆ ಅನುಸರಿಸಿದ್ದರಿಂದ ಕಡಿಮೆ ಬೆಲೆಗೆ ಗ್ರಾಹಕರಿಗೆ ವಿದ್ಯುತ್ ನೀಡಲಾಗಿತ್ತು.

ಅದೇ ವರ್ಷ 25 ಪೈಸೆ ದರವನ್ನು ಕಡಿಮೆ ಮಾಡಲಾಗಿತ್ತು. ಉಳಿದಂತೆ ಸರ್ಕಾರಗಳು ವಿದ್ಯುತ್ ಖರೀದಿ ಒಪ್ಪಂದದಲ್ಲಿ ದುಬಾರಿ ವೆಚ್ಚ ಮಾಡಿವೆ. ದರ ಕಡಿಮೆ ಇದ್ದಾಗ ಸೆಂಟ್ರಲ್ ಗ್ರಿಡ್‍ನಿಂದ ವಿದ್ಯುತ್ ಖರೀದಿಸಬೇಕು. ದರ ಹೆಚ್ಚಿದ್ದಾಗ ರಾಜ್ಯದಲ್ಲಿನ ಮೂಲಗಳಿಂದಲೇ ವಿದ್ಯುತ್ ಉತ್ಪಾದನೆಯಾಗುವ ವಿದ್ಯುತ್ ಅನ್ನು ಬಳಸಿಕೊಳ್ಳುವುದು ಬುದ್ಧಿವಂತಿಕೆಯಾಗಲಿದೆ'' ಎಂದು ವಿವರಿಸಿದರು. ''ಈ ಹಿಂದೆ ವಿದ್ಯುತ್ ಇಲಾಖೆಯಲ್ಲಿ ನಡೆದ ಸಾವಿರಾರು ಕೋಟಿ ರೂ.ಗಳ ಹಗರಣದ ಬಗ್ಗೆ ತನಿಖೆಯಾಗಿದೆ. ಆದರೆ, ಅದರ ಪರಿಣಾಮ ಏನು ಎಂಬುದು ಸ್ಪಷ್ಟವಾಗಿಲ್ಲ'' ಎಂದು ತಿಳಿಸಿದರು.

''ಶಕ್ತಿ ಯೋಜನೆ ಜಾರಿಗೊಳಿಸುವುದರಲ್ಲಿ ಸಾರಿಗೆ ಸಚಿವರು ಚಾಣಕ್ಯನ ನಡೆ ಅನುಸರಿಸಿದ್ದಾರೆ. 4 ಸಾರಿಗೆ ನಿಗಮಗಳು ವಾರ್ಷಿಕ 3,800 ರೂ. ನಿಂದ 4 ಸಾವಿರ ಕೋಟಿ ರೂ.ಗಳವರೆಗೂ ಆರ್ಥಿಕ ಕಷ್ಟ ಅನುಭವಿಸುತ್ತಿವೆ. ಈಗ ಸರ್ಕಾರಕ್ಕೆ ಹೊರೆಯಾಗುತ್ತಿದೆ. ನಿಗಮಗಳಿಗೆ ಲಾಭವಾಗುತ್ತಿದೆ. ಬಹಳಷ್ಟು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಪುರುಷರಿಗೂ ಉಚಿತ ಪ್ರಯಾಣ ಕಲ್ಪಿಸಬೇಕೆಂಬ ಬೇಡಿಕೆ ಇದೆ. ಆದರೆ, ಶಕ್ತಿ ಯೋಜನೆ ಜಾರಿಯಿಂದ ಬಸ್ ಸೌಲಭ್ಯಗಳ ಕೊರತೆಯಾಗಿದೆ. ಕೋವಿಡ್ ಸಮಯದಲ್ಲಿ ಗ್ರಾಮೀಣ ಪ್ರದೇಶದ ಶೇ.35ರಷ್ಟು ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಅದನ್ನು ಪುನರ್ ಆರಂಭಿಸಿಲ್ಲ. ವಿದ್ಯಾರ್ಥಿಗಳು ಬಸ್ ಸೌಲಭ್ಯಗಳಿಲ್ಲದೆ ಸಮಸ್ಯೆ ಅನುಭವಿಸುತ್ತಿದ್ದಾರೆ'' ಎಂದು ವಿವರಿಸಿದರು.

ಅನ್ನಭಾಗ್ಯ ಯೋಜನೆಯಡಿ ನೇರ ನಗದು ವರ್ಗಾವಣೆ:ರಾಜ್ಯದ 4 ಕೋಟಿ 42 ಲಕ್ಷ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಖಾತೆಗೆ ತಲಾ 170 ರೂ. ಗಳನ್ನು ನೇರ ನಗದು ವರ್ಗಾವಣೆ ಮೂಲಕ ತಲುಪಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ತಿಳಿಸಿದರು.

ರಾಜ್ಯದಲ್ಲಿ ಎಪಿಎಲ್, ಬಿಪಿಎಲ್ ಸೇರಿ 1.28 ಕೋಟಿ ಪಡಿತರ ಚೀಟಿದಾರರು ಇದ್ದಾರೆ. ಒಟ್ಟಾರೆ 4.42 ಕೋಟಿ ಫಲಾನುಭವಿಗಳು ಇದ್ದಾರೆ. ಇದುವರೆಗೂ ಯಾವ ಫಲಾನುಭವಿಗಳು ಹಕ್ಕು ಪಡೆಯುತ್ತಿದ್ದಾರೋ ಅವರಿಗೆ ಹೆಚ್ಚುವರಿ ಅಕ್ಕಿ ನೀಡುವವರೆಗೂ ಪ್ರತಿ ಕೆಜಿಗೆ 34 ರೂ. ನಂತೆ ತಲಾ 170 ರೂ. ನೀಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ ಕುಮಾರಸ್ವಾಮಿ ಅವರು, ಹೆಚ್ಚುವರಿ 5 ಕೆಜಿ ಅಕ್ಕಿ ನೀಡಲಾಗುತ್ತಿಲ್ಲ ಎಂದು ಸರ್ಕಾರ ಹಣ ನೀಡುತ್ತಿದೆ. ಅದಕ್ಕೆ ತಕರಾರು ಇಲ್ಲ. ಆದರೆ, ಅನ್ನಭಾಗ್ಯದ ಹಣ ವರ್ಗಾವಣೆ ಮಾಡಲು ಸಾಕಷ್ಟು ಅಡೆತಡೆಗಳಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದರು.

ಆ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಾನೂನು ಸಚಿವ ಎಚ್.ಕೆ. ಪಾಟೀಲ್, ಯಾವ ಅಧಿಕಾರಿ ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ. ಅವರ ಹೆಸರು ಹೇಳಿ ಎನ್ನುವ ಮೂಲಕ ಅನ್ನಭಾಗ್ಯದ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುವ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು. ಆಗ ಕುಮಾರಸ್ವಾಮಿ ಅವರು ಜನರನ್ನು ದಾರಿ ತಪ್ಪಿಸುವ ಅಧಿಕಾರಿಯನ್ನು ಗುರುತಿಸುವುದು ನಿಮ್ಮ ಜವಾಬ್ದಾರಿ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ:ಕಾಮಗಾರಿಗಳಿಗೆ ನೀಡಿರುವ ತಡೆಯಾಜ್ಞೆ ತೆರವು ಮಾಡಿ: ಸರ್ಕಾರಕ್ಕೆ ಶಾಸಕ ಜಿ.ಟಿ.ದೇವೇಗೌಡ ಆಗ್ರಹ

ABOUT THE AUTHOR

...view details