ಬೆಂಗಳೂರು:ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಭಾವಿಸಲಾಗಿದ್ದ ಪಂಚ ರಾಜ್ಯಗಳ ವಿಧಾನಸಭೆ ಫಲಿತಾಂಶದಿಂದ ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಪ್ರತಿ ಪಕ್ಷ ಬಿಜೆಪಿಗಳೆರಡರಲ್ಲೂ ಸಂಭ್ರಮ ಮನೆಮಾಡಿದೆ.
ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶದ ಪ್ರಭಾವಳಿಯನ್ನಿಟ್ಟುಕೊಂಡು ನಡೆಯಲಿರುವ ಲೋಕಸಭೆ ಸಮರದಲ್ಲಿ ಅತ್ಯಧಿಕ ಕ್ಷೇತ್ರಗಳನ್ನು ಗೆಲ್ಲುವ ಬಗ್ಗೆ ರಾಜ್ಯ ಉಭಯ ಪಕ್ಷಗಳಲ್ಲೂ ಆತ್ಮ ವಿಶ್ವಾಸ ಮೂಡಿದೆ. ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ಅತಿ ಹೆಚ್ಚಿನ ಸೀಟುಗಳನ್ನು ಗೆಲ್ಲುವ ಧೈರ್ಯ ಕಾಂಗ್ರೆಸ್ ಮತ್ತು ಬಿಜೆಪಿ ಪಾಳಯದಲ್ಲಿ ಮೂಡಿದೆ.
ಕರ್ನಾಟಕದಲ್ಲಿ ಪಂಚರಾಜ್ಯ ಫಲಿತಾಂಶ ಪರಿಣಾಮ ಉತ್ತರ ಭಾರತದ ಹಿಂದಿ ಪ್ರಾಬಲ್ಯದ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ಗಢದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಪ್ರಧಾನಿ ಮೋದಿ ಜನಪ್ರಿಯತೆ ಹೆಚ್ಚಿಸಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಅಬ್ಬರದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿ ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ದ ಪ್ರತಿಪಕ್ಷ ಬಿಜೆಪಿಗೆ ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶದಿಂದ ಹೊಸ ಭರವಸೆ ಬಂದಿದೆ.
ಮೂರು ಪ್ರಮುಖ ಹಿಂದಿ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಗೆದ್ದಿರುವುದು ಪ್ರಧಾನಮಂತ್ರಿ ಮೋದಿ ನಾಯಕತ್ವಕ್ಕೆ ನೀಡಿದ ಬೆಂಬಲವಾಗಿದೆ ಎಂದು ರಾಜ್ಯ ಬಿಜೆಪಿ ನಾಯಕರುಗಳು ಅಭಿಪ್ರಾಯ ಪಟ್ಟಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ ಅವರು ಪಂಚರಾಜ್ಯಗಳ ಫಲಿತಾಂಶ ಪ್ರಭಾವದಿಂದ ರಾಜ್ಯದಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಮ್ಯಾಜಿಕ್ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ನಡೆದಿಲ್ಲ ಎಂದು ಪ್ರತಿಪಾದಿಸುತ್ತಿರುವ ಬಿಜೆಪಿ ಮುಖಂಡರು ದೇಶದ ರಕ್ಷಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಒಬ್ಬರೇ ಗ್ಯಾರಂಟಿ ನಾಯಕ ಎಂದು ಪ್ರಚಾರ ಮಾಡಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವ ಆತ್ಮ ವಿಶ್ವಾಸ ಹೊಂದಿದ್ದಾರೆ.
ಆರು ತಿಂಗಳ ಹಿಂದೆ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಅಧಿಕಾರವನ್ನು ಕಳೆದುಕೊಂಡು ಕೇವಲ 66 ಕ್ಷೇತ್ರಗಳನ್ನು ಮಾತ್ರ ಗೆದ್ದಿದ್ದ ಬಿಜೆಪಿ, ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವ ಬಗ್ಗೆ ಆತಂಕ ಹೊಂದಿತ್ತು. ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ 25 ಕ್ಷೇತ್ರಗಳನ್ನು ಉಳಿಸಿಕೊಳ್ಳುವುದು ಹೇಗೆ ಎನ್ನುವ ಬಗ್ಗೆ ಚಿಂತಾಕ್ರಾಂತವಾಗಿತ್ತು. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಮತದಾರ ಮನ್ನಣೆ ನೀಡುವುದಿಲ್ಲ ಎನ್ನುವ ಖಚಿತ ಅಭಿಪ್ರಾಯವನ್ನು ರಾಜ್ಯ ಬಿಜೆಪಿ ಮುಖಂಡರುಗಳು ಹೊಂದಿದ್ದು ಜೆಡಿಎಸ್ ಮೈತ್ರಿ ನೆರವಿನಿಂದ ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲಿ ವಿಜಯ ಸಾಧಿಸುವ ಸಾಧ್ಯತೆಗಳ ಲೆಕ್ಕಾಚಾರ ಹಾಕತೊಡಗಿದೆ.
ಕರ್ನಾಟಕದಲ್ಲಿ ಪಂಚರಾಜ್ಯ ಫಲಿತಾಂಶ ಪರಿಣಾಮ ಪಂಚ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ಬಿಜೆಪಿಗೆ ಮಾತ್ರವಲ್ಲ ರಾಜ್ಯದಲ್ಲಿನ ಆಡಳಿತ ಪಕ್ಷ ಕಾಂಗ್ರೆಸ್ ಪಕ್ಷಕ್ಕೂ ಹೊಸ ಹುಮ್ಮಸ್ಸನ್ನು ನೀಡಿದೆ. ಬಿಜೆಪಿಯು ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳನ್ನು ಕಟುವಾಗಿ ಟೀಕಿಸಿದ್ದರೂ ಸಹ ತೆಲಂಗಾಣ ವಿಧಾನಸಭೆಯಲ್ಲಿ ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನೇ ಚುನಾವಣಾ ಪ್ರಚಾರದ ವಸ್ತುವನ್ನಾಗಿಸಿಕೊಂಡು ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿರುವುದು ಕಾಂಗ್ರೆಸ್ ಪಕ್ಷದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ.
ಗ್ಯಾರಂಟಿಗಳ ಮೇಲೆ ಡಿಕೆಶಿಗೆ ಅಚಲ ವಿಶ್ವಾಸ:ಕಡು ಬಡವರ, ಮಧ್ಯಮ ವರ್ಗದವರಿಗೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಪ್ರಯೋಜನಕಾರಿಯಾಗಿವೆ. ಈ ಯೋಜನೆಯ ಹೆಸರಿನಿಂದಲೇ ಪಕ್ಷಕ್ಕೆ ಮತಗಳನ್ನು ಸೆಳೆಯಬಹುದೆನ್ನುವುದು ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲೂ ಸಹ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನವನ್ನೇ ಮುಂದಿಟ್ಟುಕೊಂಡು ಅತ್ಯಧಿಕ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಬಹುದು ಎನ್ನುವ ಲೆಕ್ಕಾಚಾರ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರದ್ದಾಗಿದೆ.
ರಾಜ್ಯದಲ್ಲಿ ಈಗಾಗಲೇ ಅನುಷ್ಠಾನಗೊಳಿಸಿರುವ ಗ್ಯಾರಂಟಿ ಯೋಜನೆಗಳ ಪ್ರಯೋಜನಗಳನ್ನು ಮತದಾರರಿಗೆ ಮನವರಿಕೆ ಮಾಡಿ ಹೆಚ್ಚಿನ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಿದೆ ಎನ್ನುವುದು ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ದಡಪಟ್ಟಿದೆ ಎನ್ನುವುದು ಕಾಂಗ್ರೆಸ್ ಪಕ್ಷದ ಮುಖಂಡರ ನಿಲುವಾಗಿದೆ.
ಪಂಚ ರಾಜ್ಯಗಳ ಪೈಕಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ನಿರೀಕ್ಷಿತ ಜಯಗಳಿಸದೇ ಇರುವುದರ ಬಗ್ಗೆ ರಾಜ್ಯ ಕಾಂಗ್ರೆಸ್ ಮುಖಂಡರಲ್ಲಿ ಬೇಸರವಿದೆ. ಲೋಕಸಭಾ ಚುನಾವಣೆಯಲ್ಲಿ ಹಿಂದಿ ರಾಜ್ಯಗಳ ಚುನಾವಣೆಯ ಫಲಿತಾಂಶ ಪ್ರಭಾವ ಬೀರುವುದನ್ನು ತಡೆಗಟ್ಟಲು ''ಗ್ಯಾರಂಟಿ ಯೋಜನೆಗಳನ್ನೇ '' ಅಸ್ತ್ರವನ್ನಾಗಿ ಬಳಸುವ ಸುಳಿವನ್ನು ಕಾಂಗ್ರೆಸ್ ನೇತಾರರು ನೀಡುತ್ತಿದ್ದಾರೆ. ಪಂಚರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾದರೂ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆ ಇಲ್ಲ ಎನ್ನುವುದು ಕಾಂಗ್ರೆಸ್ ಪಕ್ಷಕ್ಕೆ ಸಮಾಧಾನ ತಂದಿದೆ.
ಕರ್ನಾಟಕದಲ್ಲಿ ಪಂಚರಾಜ್ಯ ಫಲಿತಾಂಶ ಪರಿಣಾಮ ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಾದ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳದಲ್ಲಿ ಬಿಜೆಪಿ ಅಧಿಕಾರದಲ್ಲಿ ಇಲ್ಲ. ಕಾಂಗ್ರೆಸ್ ಪಕ್ಷವು ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಭದ್ರ ಬುನಾದಿ ಇಲ್ಲ ಎನ್ನುವುದನ್ನು ಬಂಡವಾಳವಾಗಿಟ್ಟುಕೊಂಡು ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರ ಗೆಲ್ಲುವ ಯೋಚನೆಯನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ.
ಹೆಚ್ಚಿನ ಕ್ಷೇತ್ರ ಗೆದ್ದು ನಾಯಕತ್ವದ ಖದರ್ ತೋರಿಸಲು ಬಿವೈವಿ- ಅಶೋಕ್ ರೆಡಿ:ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಜಯಿಸಿ ತಮ್ಮ ನಾಯಕತ್ವವನ್ನು ತೋರಿಸಿಕೊಡಬೇಕು ಎನ್ನುವ ಉದ್ದೇಶವನ್ನು ಬಿಜೆಪಿಯಲ್ಲಿ ನೂತನ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಹೊಸ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೊಂದಿದ್ದಾರೆ. ಹಾಗೆಯೇ ಕಾಂಗ್ರೆಸ್ ಪಕ್ಷದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಿಸಿ ತಮ್ಮ ಮುಖ್ಯಮಂತ್ರಿ ಕುರ್ಚಿ ಗಟ್ಟಿಗೊಳಿಸಬೇಕು ಎನ್ನುವ ಸನ್ನಾಹದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ.
ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶವು ರಾಜ್ಯದಲ್ಲಿನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ವಿಭಿನ್ನ ದೃಷ್ಟಿಕೋನಗಳಲ್ಲಿ ಹೊಸ ಹುರುಪನ್ನು ನೀಡಿದೆ. ಫಲಿತಾಂಶವನ್ನೇ ಮಾನದಂಡವಾಗಿಟ್ಟುಕೊಂಡು ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರ ಗೆಲ್ಲುವ ಅಭಿಲಾಷೆಯನ್ನು ಪ್ರತಿಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷ ಕಾಂಗ್ರೆಸ್ ಹೊಂದಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯತೆ ಮುಂದಿಟ್ಟುಕೊಂಡು ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿ ಬಿಜೆಪಿಯದ್ದಾಗಿದೆ. ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ವೈಫಲ್ಯಗಳು ಹಾಗೂ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಲಾಭವನ್ನು ಪಡೆದು ಲೋಕಸಭಾ ಚುನಾವಣೆಯಲ್ಲಿ 20ಕ್ಕೂ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವ ಟಾರ್ಗೆಟ್ನ್ನು ಕಾಂಗ್ರೆಸ್ ಪಕ್ಷ ಹೊಂದಿದೆ.
ಇದನ್ನೂ ಓದಿ:ಕಾಂಗ್ರೆಸ್ ನಮ್ಮನ್ನು ಹೊರಗಿಟ್ಟಾಗ ಪ್ರಧಾನಿ ಮೋದಿ, ಅಮಿತ್ ಶಾ ಸ್ವಾಗತಿಸಿದರು: ಹೆಚ್ ಡಿ ದೇವೇಗೌಡ