ಬೆಂಗಳೂರು: ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ವಿವಿಧ ತನಿಖಾ ಸಂಸ್ಥೆಗಳು ಅವಿರತ ಕಾರ್ಯನಿರ್ವಹಿಸುತ್ತಿವೆ. ನಿನ್ನೆ (ಸೋಮವಾರ) ಬೆಂಗಳೂರಿನ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 1.02 ಕೋಟಿ ರೂ. ಮೌಲ್ಯದ 2.05 ಕೆ.ಜಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ 1.50 ಕೋಟಿ ರೂ. ಮೌಲ್ಯದ 2.67 ಕೆ.ಜಿ ಮಾದಕ ವಸ್ತುಗಳು ಮತ್ತು ಬೆಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 61.40 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ ಎಂದು ಚುನಾವಣಾ ಆಯೋಗವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ ಒಟ್ಟು 111.11 ಕೋಟಿ ನಗದು, 22.33 ಕೋಟಿ ರೂ. ಮೌಲ್ಯದ ಉಚಿತ ಕೊಡುಗೆಗಳನ್ನು ಸೀಜ್ ಮಾಡಲಾಗಿದೆ.
74.13 ಕೋಟಿ ರೂ. ಮೌಲ್ಯದ 19.62 ಲಕ್ಷ ಲೀಟರ್ ಮದ್ಯ, 21.13 ಕೋಟಿ ರೂ. ಮೌಲ್ಯದ 1,662.28 ಕೆ.ಜಿ ಮಾದಕ ವಸ್ತುಗಳು, 76.05 ಕೋಟಿ ರೂ. ಮೌಲ್ಯದ 149.42 ಕೆಜಿ ಚಿನ್ನ, 4.48 ಕೋಟಿ ರೂ. ಮೌಲ್ಯದ 644.54 ಕೆಜಿ ಬೆಳ್ಳಿ ಜಪ್ತಿಯಾಗಿದೆ. ಒಟ್ಟು 80.53 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳು ದೊರೆತಿವೆ. ನಗದು, ಮದ್ಯ ಸೇರಿದಂತೆ ಒಟ್ಟು 309.35 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ.
2,390 ಎಫ್‌ಐಆರ್, 69,825 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದ್ದು, 18 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಶಸ್ತ್ರಾಸ್ತ್ರಗಳ ಪರವಾನಿಗೆ ರದ್ದುಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 5,522 ಪ್ರಕರಣ ದಾಖಲಿಸಲಾಗಿದೆ. 10,077 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 15,456 ಜಾಮೀನುರಹಿತ ವಾರೆಂಟ್‌ಗಳನ್ನು ಜಾರಿಗೊಳಿಸಲಾಗಿದೆ ಎಂದು ಆಯೋಗವು ತಿಳಿಸಿದೆ.