ಬೆಂಗಳೂರು: ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯನ್ನು ಶೀಘ್ರವಾಗಿ ನಡೆಸುವುದು ಅನಿವಾರ್ಯವಾಗಿದೆ ಎಂದು ರಾಜ್ಯ ಚುನಾವಣಾ ಆಯೋಗವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.
ಮುಂಜಾಗ್ರತಾ ಕ್ರಮದೊಂದಿಗೆ ಶೀಘ್ರದಲ್ಲಿ ಗ್ರಾಮ ಪಂಚಾಯತ್ ಚುನಾವಣೆಯನ್ನು ನಡೆಸುವುದು ಸೂಕ್ತವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ. ರಾಜ್ಯದಲ್ಲಿ ಕೋವಿಡ್ 19 ಪ್ರಕರಣ ದಿನೇ ದಿನೇ ಏರಿಕೆಯಾಗುತ್ತಿರುವ ಹಿನ್ನೆಲೆ ಗ್ರಾಮ ಪಂಚಾಯತ್ಗಳ ಚುನಾವಣೆಯನ್ನು ಮುಂದೂಡುವ ಬಗ್ಗೆ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳುವಂತೆ ಕೋರಿರುವ ಪ್ರಸ್ತಾವನೆಯನ್ನು ಆಯೋಗವು ಪರಿಶೀಲಿಸಿದೆ ಎಂದು ತಿಳಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 8(2) ರಂತೆ ಆಡಳಿತಾಧಿಕಾರಿಗಳು ನೇಮಕಗೊಂಡ 6 ತಿಂಗಳ ಒಳಗಾಗಿ ಗ್ರಾಮ ಪಂಚಾಯತ್ಗಳಿಗೆ ಚುನಾವಣೆಯನ್ನು ನಡೆಸಬೇಕಾಗುತ್ತದೆ. ಕೋವಿಡ್-19 ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಸಹ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ರಾಜ್ಯ ಚುನಾವಣಾ ಆಯೋಗವು ಎಸ್.ಒ.ಪಿ.ಯನ್ನು ಹೊರಡಿಸಿರುತ್ತದೆ.
ಸಾಮಾನ್ಯವಾಗಿ ಆಯೋಗವು ಜಿಲ್ಲಾವಾರು ಎರಡು ಹಂತದಲ್ಲಿ ಚುನಾವಣೆಯನ್ನು ನಡೆಸಲಾಗುತ್ತಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತಾಲೂಕುಗಳನ್ನು ಪ್ರತ್ಯೇಕಿಸಿ ಎರಡು ಹಂತದಲ್ಲಿ ಚುನಾವಣೆಯನ್ನು ನಡೆಸಲು ಉದ್ದೇಶಿಸಿದೆ. ಜೊತೆಗೆ ಚುನಾವಣಾ ಸಿಬ್ಬಂದಿಯ ಚಲನವಲನಗಳನ್ನು ನಿಯಂತ್ರಿಸುವ ಉದ್ದೇಶದಿಂದ ಚುನಾವಣೆಗೆ ಆಯಾ ತಾಲೂಕಿನ ಸಿಬ್ಬಂದಿಯನ್ನು ಮತಗಟ್ಟೆ ಅಧಿಕಾರಿಗಳನ್ನಾಗಿ ನಿಯೋಜಿಸುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಜಿಲ್ಲಾ ಮತ್ತು ತಾಲೂಕು ಪಂಚಾಯತ್ಗಳ ಅವಧಿಯು 2021ರ ಮೇ-ಜೂನ್ ನಲ್ಲಿಮುಕ್ತಾಯಗೊಳ್ಳಲಿದ್ದು, ಅವುಗಳಿಗೂ ಸಾರ್ವತ್ರಿಕ ಚುನಾವಣೆಯನ್ನು ನಡೆಸಬೇಕಾಗುತ್ತದೆ. 50 ಹೊಸ ತಾಲೂಕುಗಳ ರಚನೆ ಮಾಡಿರುವುದರಿಂದ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಮೀಸಲಾತಿ ಕಾರ್ಯವನ್ನು 2020ರ ಡಿಸೆಂಬರ್ ನಿಂದ ಪ್ರಾರಂಭಿಸಬೇಕಾಗುತ್ತದೆ. ಜೊತೆಗೆ ಬಿಬಿಎಂಪಿಯ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ಆಯೋಗವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
2021ರ ಮೇನಲ್ಲಿ 55 ನಗರ ಸ್ಥಳೀಯ ಸಂಸ್ಥೆಗಳ ಅವಧಿ ಪೂರ್ಣಗೊಳ್ಳುತ್ತಿರುವುದರಿಂದ, ಇವುಗಳಿಗೂ ಸಹ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ಆಯೋಗ ಸಿದ್ಧತೆಯನ್ನು ಮಾಡಿಕೊಳ್ಳಬೇಕಾಗಿದೆ. 2021ನೇ ಸಾಲಿನಲ್ಲಿ ರಾಜ್ಯ ಚುನಾವಣಾ ಆಯೋಗ ಈ ಎಲ್ಲಾ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಬೇಕಿರುವುದರಿಂದ, 2020ನೇ ಸಾಲಿನಲ್ಲಿ ಗ್ರಾಮ ಪಂಚಾಯತ್ಗಳ ಸಾರ್ವತ್ರಿಕ ಚುನಾವಣೆಯನ್ನು ಮುಕ್ತಾಯಗೊಳಿಸುವುದು ಸೂಕ್ತವಾಗಿರುತ್ತದೆ ಎಂದು ತಿಳಿಸಿದೆ.