ಬೆಂಗಳೂರು:ವಿದ್ಯಾರ್ಥಿಗಳು ತೆಲುಗು ಅಥವಾ ಉರ್ದು ಭಾಷೆ ಕಲಿಯಬೇಕೆಂದು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಆದೇಶ ಹೊರಡಿಸಿರುವ ಹಿನ್ನೆಲೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪತ್ರ ಬರೆದು ಆದೇಶ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರ ಬರೆದಿರುವ ರಾಜ್ಯ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ , ಈ ನಿರ್ಧಾರ ಎರಡೂ ರಾಜ್ಯಗಳ ಸೌಹಾರ್ದತೆಗೆ ಧಕ್ಕೆಯಾಗಲಿದೆ. ಆಂಧ್ರದ ಗಡಿ ಪ್ರದೇಶದಲ್ಕಿ ವಾಸಿಸುವ ಕನ್ನಡಿಗರ ಮನೋಸ್ಥೈರ್ಯದ ಮೇಲೆ ತೀವ್ರತರವಾದ ಪರಿಣಾಮ ಬೀರಲಿದೆ. ಹಾಗಾಗಿ, ಗಡಿಯಲ್ಲಿರುವ ಕನ್ನಡಿಗರ ಹಿತದೃಷ್ಟಿಯಿಂದ ಈ ಆದೇಶವನ್ನು ಹಿಂಪಡೆಯಬೇಕೆಂದು ಕೋರಿದ್ದಾರೆ.
ಆಂಧ್ರ ಸಿಎಂಗೆ ಸಚಿವ ಸುರೇಶ್ ಕುಮಾರ್ ಪತ್ರ ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಸಂಬಂಧ ಐತಿಹಾಸಿಕವಾದುದು. ಕೃಷ್ಣದೇವರಾಯನ ಕಾಲಕ್ಕಿಂತಲೂ ಮೊದಲಿನಿಂದಲೂ ಈ ಎರಡೂ ರಾಜ್ಯಗಳು ಯಾವಾಗಲೂ ಸಹೋದರ ಸಂಬಂಧದಲ್ಲೇ ನಡೆದುಕೊಂಡು ಬರುತ್ತಿವೆ. ಭಾಷೆ ಸೇರಿದಂತೆ ಎಲ್ಲ ವಿಷಯಗಳಲ್ಲೂ ಎರಡೂ ರಾಜ್ಯಗಳು ಪರಸ್ಪರ ಸೌಹಾರ್ದತೆಯಿಂದಲೇ ಇವೆ. ಇದು ಎರಡೂ ರಾಜ್ಯಗಳಿಗೂ ಅಭಿಮಾನದ ಸಂಗತಿಯಾಗಿದೆ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಹತ್ತಾರು ತೆಲುಗು ಮಾಧ್ಯಮ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಆಂಧ್ರ ಸರ್ಕಾರ ಮಾಡಿರುವ ನಿರ್ಧಾರ, ಕನ್ನಡ ಭಾಷಾ ಶಿಕ್ಷಕರ ಜೀವನವನ್ನು ಅಪಾಯಕ್ಕೆ ಸಿಲುಕಿಸುತ್ತದೆ. ಅಲ್ಲದೆ ಕರ್ನಾಟಕದ ಹೊರಗೆ ವಾಸಿಸುತ್ತಾರೆ ಎಂಬ ಕಾರಣಕ್ಕೆ ಕನ್ನಡಿಗರ ಮಕ್ಕಳು ಮಾತೃಭಾಷೆಯಿಂದ ವಂಚಿತರಾಗುತ್ತಾರೆ. ಹಾಗಾಗಿ ಕನ್ನಡ ಭಾಷೆಯಾಗಿ ಇಲ್ಲವೇ ಮಾಧ್ಯಮವಾಗಿ ಕಲಿಸುವ ಅಲ್ಪಸಂಖ್ಯಾತ ಭಾಷಾ ಶಾಲೆಗಳನ್ನು ಮುಂದುವರೆಸಬೇಕು ಎಂದು ಪತ್ರದಲ್ಲಿ ಸುರೇಶ್ ಕುಮಾರ್ ತಿಳಿಸಿದ್ದಾರೆ.
ತಮ್ಮ ರಾಜ್ಯದಲ್ಲಿ ವಾಸಿಸುವ ಕನ್ನಡಿಗರ ಹಿತಾಸಕ್ತಿ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪತ್ರದ ಮೂಲಕ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ಸುರೇಶ್ ಕುಮಾರ್ ಒತ್ತಾಯಿಸಿದ್ದಾರೆ.