ಬೆಂಗಳೂರು:ಮಕ್ಕಳ ನಿರಂತರ ಕಲಿಕೆಗೆ ಯಾವುದೇ ಅಡಚಣೆಯಾಗದಂತೆ ಕಲಿಕೆ ಮುಂದುವರೆಸಲು ಜುಲೈ 20ರಿಂದ ದೂರದರ್ಶನದ ಚಂದನ ವಾಹಿನಿಯಲ್ಲಿ ಇ-ಕ್ಲಾಸ್ ಆರಂಭಿಸಿಲು ಸರ್ಕಾರ ನಿರ್ಧರಿಸಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಜುಲೈ 20ರಿಂದ 20 ದಿನಗಳ ಕಾಲ 8ರಿಂದ 10ನೇ ತರಗತಿಯ ಮಕ್ಕಳಿಗೆ ಕನ್ನಡ, ಇಂಗ್ಲಿಷ್, ಸಂಸ್ಕೃತ, ಉರ್ದು, ಹಿಂದಿ ಹಾಗೂ ಕನ್ನಡ ಮಾಧ್ಯಮದಲ್ಲಿ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳಲ್ಲಿ ಸೇತುಬಂಧ (Bridge Course) ಕಾರ್ಯಕ್ರಮಗಳನ್ನು ದೂರದರ್ಶನದ ಚಂದನ ವಾಹಿನಿಯಲ್ಲಿ ಬಿತ್ತರಿಸಲಾಗುವುದೆಂದು ಹೇಳಿದರು.
20 ದಿನಗಳ ಸೇತುಬಂಧ ತರಗತಿಗಳ ಬಳಿಕ 8ರಿಂದ 10ನೇ ತರಗತಿಗಳಿಗೆ ಕನ್ನಡ ಮಾಧ್ಯಮದಲ್ಲಿ ದೈನಂದಿನ ಬೋಧನೆ ಮುಂದುವರೆಯಲಿದ್ದು, ಮುಂದಿನ ದಿನಗಳಲ್ಲಿ 1ರಿಂದ 10ನೇ ತರಗತಿಯ ಎಲ್ಲಾ ಮಕ್ಕಳಿಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ವಿಡಿಯೋ ಪಾಠಗಳನ್ನು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ದೂರದರ್ಶನ ಚಂದನ ವಾಹಿನಿಯು ಪ್ರಸಾರ ಮಾಡಲಿದೆ ಎಂದು ಹೇಳಿದರು.
ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಈ ಕಲಿಕೆಯ ಪ್ರಯೋಜನ ಪಡೆಯುವಲ್ಲಿ ಪ್ರೇರೆಪಿಸಬೇಕೆಂದು ಮನವಿ ಮಾಡಿದ್ದು, ಶಿಕ್ಷಣ ಇಲಾಖೆಯ ಯುಟ್ಯೂಬ್ ವಾಹಿನಿಯಲ್ಲಿಯೂ ಸಹ ಈ ಎಲ್ಲಾ ತರಗತಿಗಳು ಲಭ್ಯವಿರಲಿವೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಮಾಡಿಕೊಳ್ಳಬಹುದಾಗಿದೆ.
ಈ ತರಗತಿಗಳ ಕಲಿಕೆಯನ್ನು ಮೌಲ್ಯಮಾಪನ ಮಾಡಲು ಪ್ರತಿ 20 ವಿದ್ಯಾರ್ಥಿಗಳಿಗೆ ಒಬ್ಬ ಮೆಂಟರ್ ಶಿಕ್ಷಕರನ್ನು ಮ್ಯಾಪಿಂಗ್ ಮಾಡಲಾಗುತ್ತಿದ್ದು, ಶಿಕ್ಷಕರು ಕಲಿಕೆಯ ಸಮರ್ಥ ಮೌಲ್ಯಮಾಪನಕ್ಕೆ ಶಿಕ್ಷಣ ಇಲಾಖೆಯು ವ್ಯವಸ್ಥಿತ ರೂಪುರೇಷೆಗಳನ್ನು ಜಾರಿಯಲ್ಲಿಟ್ಟಿದೆ ಎಂದು ತಿಳಿಸಿದರು.