ಬೆಂಗಳೂರು: ರೈತರಿಗೆ ಹೆಚ್ಚುವರಿ ಮಾರಾಟದ ಸ್ವಾತಂತ್ರ್ಯ ಸಿಕ್ಕರೆ ಕಾಂಗ್ರೆಸ್ಸಿನವರಿಗೇಕೆ ಹೊಟ್ಟೆಯುರಿ? ಕಾಂಗ್ರೆಸ್ಸಿಗರೇ, ನೀವು ರೈತರ ಪರವೋ ಅಥವಾ ದಲ್ಲಾಳಿಗಳ ಪರವೋ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಕೂಟ ಸುಳ್ಳು ಹೇಳುತ್ತಿರುವಂತೆ ಎಪಿಎಂಸಿ ಮಾರುಕಟ್ಟೆ ರದ್ದಾಗುತ್ತಿಲ್ಲ. ಅಷ್ಟಕ್ಕೂ ಎಪಿಎಂಸಿ ರಾಜ್ಯಗಳ ವ್ಯಾಪ್ತಿಗೆ ಸೇರಿದ್ದು. ವಿಚಿತ್ರವೆಂದರೆ ಎಪಿಎಂಸಿ ಕಾಯ್ದೆಗಳನ್ನೇ ರದ್ದು ಮಾಡುವುದಾಗಿ ಇದೇ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಈಗ ಬಣ್ಣ ಬದಲಿಸಿರುವ ಅದು ದಲ್ಲಾಳಿಗಳ ಪರ ಬ್ಯಾಟಿಂಗ್ ಮಾಡುತ್ತಿದೆ ಎಂದು ಮಾಧ್ಯಮ ಹೇಳಿಕೆ ಮೂಲಕ ಟೀಕಿಸಿದ್ದಾರೆ.
ರೈತರನ್ನು ದಾರಿ ತಪ್ಪಿಸಲು ಕಾಂಗ್ರೆಸ್ ಕೂಟ ಹೇಳುತ್ತಿರುವಂತೆ ಕೇಂದ್ರವು ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ರದ್ದು ಮಾಡುತ್ತಿಲ್ಲ. ನಿಜ ಹೇಳಬೇಕೆಂದರೆ ಹೊಸ ಕಾಯ್ದೆಗಳ ನಂತರ ವಿವಿಧ ಬೆಳೆಗಳ ಎಂಎಸ್ಪಿಯನ್ನು ಹೆಚ್ಚಿಸಲಾಗಿದೆ. ಅಲ್ಲದೆ ಎಂಎಸ್ಪಿ ಅಡಿ ಈ ಸಲ ರೈತರಿಂದ ಇನ್ನೂ ಹೆಚ್ಚು ಬೆಳೆ ಖರೀದಿಸಲಾಗಿದೆ.
ಈಗ ರೈತರ ಕೃಷಿ ಉತ್ಪನ್ನಗಳ ಅಂತರ್ ರಾಜ್ಯ ಸಾಗಣೆಗೆ ನಿರ್ಬಂಧವಿಲ್ಲ. ಕೃಷಿಯೇತರ ಉತ್ಪನ್ನಗಳಿಗೆ ಇದ್ದಂತೆಯೇ ಕೃಷಿ ಉತ್ಪನ್ನಗಳಿಗೂ ಈಗ "ಒಂದು ದೇಶ ಒಂದು ಮಾರುಕಟ್ಟೆ". ರೈತರಿಗೆ ದೇಶದ ಮಾರುಕಟ್ಟೆಗಳೆಲ್ಲವೂ ಮುಕ್ತ. ರೈತರು ಕೂಡ ತಮ್ಮ ಬೆಳೆಗಳ ಬೆಲೆ ನಿಗದಿಪಡಿಸಬಹುದು. ಹಾಗೆಯೇ ರೈತರು ದಲ್ಲಾಳಿಗಳಿಂದ ಮುಕ್ತ. ಆದರೆ ಕಾಂಗ್ರೆಸ್ ದಲ್ಲಾಳಿಗಳ ಜೊತೆ ಕೈಜೋಡಿಸಿ ಕೃಷಿ ಮಸೂದೆಗಳ ಬಗ್ಗೆ ಅಪಪ್ರಚಾರ ನಡೆಸುತ್ತಿದೆ. ಮುಗ್ಧ ರೈತರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಓದಿ:ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ಸಿಡಿದೆದ್ದ ರಾಜ್ಯ ಕಾಂಗ್ರೆಸ್ ನಾಯಕರು: ದಿನದ ಬೆಳವಣಿಗೆ ಹೀಗಿದೆ
ಕೇಂದ್ರವೇ ಇರಲಿ, ರಾಜ್ಯವೇ ಇರಲಿ, ಕಾಂಗ್ರೆಸ್ ಆಡಳಿತದಲ್ಲಿಯೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರದಲ್ಲಿದ್ದಾಗ ರೈತರ ಮೇಲೆ ಇನ್ನಿಲ್ಲದ ದೌರ್ಜನ್ಯ ಎಸಗಿ ಉಡಾಫೆ ಮಾತು ಆಡುತ್ತಿದ್ದ ಕಾಂಗ್ರೆಸ್ಸಿಗರಿಗೆ ಈಗ ರೈತರ ಬಗ್ಗೆ ಅಗಾಧ ಪ್ರೀತಿ ಹೊಮ್ಮಿದೆ. ಕಾಂಗ್ರೆಸಿಗರೇ, ಇದು ಮಾಹಿತಿ ಯುಗ. ಬಹುಕಾಲ ನೀವು ರೈತರಿಗೆ ಮಂಕುಬೂದಿ ಎರಚಲಾರಿರಿ ಎಂದು ಟಾಂಗ್ ನೀಡಿದ್ದಾರೆ.
ಕಾಯ್ದೆ ಸಮರ್ಥನೆ:ರೈತರನ್ನು ಎಲ್ಲಾ ರೀತಿಯ ಕಾನೂನು ಸಂಕೋಲೆಗಳಿಂದ ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರವು ಕ್ರಾಂತಿಕಾರಕ ಕೃಷಿ ಕ್ಷೇತ್ರ ಸುಧಾರಣಾ ಕಾಯ್ದೆಗಳನ್ನು ರೂಪಿಸಿದೆ. ರೈತರಿಗೆ ಈಗ ಎಪಿಎಂಸಿ ಹೊರತಾಗಿ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಹೆಚ್ಚುವರಿ ಆಯ್ಕೆ ಸಿಕ್ಕಿದೆ. ರೈತರು ಈಗ ತಮ್ಮ ಬೆಳೆಗಳನ್ನು ಎಪಿಎಂಸಿ ಮಾರುಕಟ್ಟೆಯಲ್ಲೂ ಮಾರಬಹುದು ಅಥವಾ ಹೆಚ್ಚಿನ ಬೆಲೆ ಸಿಗುವುದಾದರೆ ಎಪಿಎಂಸಿ ಹೊರೆಗಿನ ವ್ಯಾಪಾರಿಗಳಿಗೂ ಮಾರಬಹುದು ಎಂದು ಕಾಯ್ದೆಯನ್ನು ಸಮರ್ಥಿಸಿಕೊಂಡಿದ್ದಾರೆ.