ಕರ್ನಾಟಕ

karnataka

ETV Bharat / state

ಅಕ್ರಮ ಗುರುತು ಚೀಟಿ ಸೃಷ್ಟಿ ಪ್ರಕರಣ: ಸಮಗ್ರ ತನಿಖೆಗೆ ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ

ಹೆಬ್ಬಾಳದಲ್ಲಿ ಅಕ್ರಮ ಗುರುತು ಚೀಟಿ ಪತ್ತೆ ಪ್ರಕರಣ ಸಂಬಂಧ ಸಮಗ್ರ ತನಿಖೆಗೆ ಶಿಫಾರಸು ಮಾಡುವಂತೆ ಬಿಜೆಪಿ ನಿಯೋಗ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

duplicate-voter-id-case-bjp-appeals-to-the-election-commission-for-a-investigation
ಅಕ್ರಮ ಗುರುತು ಚೀಟಿ ಸೃಷ್ಟಿ ಪ್ರಕರಣ: ಸಮಗ್ರ ತನಿಖೆಗೆ ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ

By ETV Bharat Karnataka Team

Published : Oct 26, 2023, 2:35 PM IST

ಬೆಂಗಳೂರು: ಹೆಬ್ಬಾಳ ಕ್ಷೇತ್ರದಲ್ಲಿ ಅಕ್ರಮ ಗುರುತು ಚೀಟಿ ಸೃಷ್ಟಿ ಪ್ರಕರಣದ ಸಮಗ್ರ ತನಿಖೆಗೆ ಶಿಫಾರಸು ಮಾಡುವಂತೆ ಬಿಜೆಪಿ ನಿಯೋಗವು ಚುನಾವಣಾ ಆಯೋಗವನ್ನು ಕೋರಿದೆ. ಈ ಸಂಬಂಧ ಬಿಜೆಪಿ ನಿಯೋಗವು ಇಂದು ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಶೇಷಾದ್ರಿ ರಸ್ತೆಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿದ ಮಾಜಿ ಸಚಿವ ಎಸ್.ಸುರೇಶ್ ಕುಮಾರ್, ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಮುಖಂಡ ಭಾಸ್ಕರ ರಾವ್, ವಕೀಲರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿವೇಕ್ ರೆಡ್ಡಿ ಮತ್ತು ರಾಜ್ಯ ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ಯೋಗೇಂದ್ರ ಹೂಡಘಟ್ಟ, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಮುಖಂಡರಾದ ಕಟ್ಟಾ ಜಗದೀಶ್ ಅವರ ನಿಯೋಗವು ಚುನಾವಣಾ ಆಯುಕ್ತರನ್ನು ಭೇಟಿ ಮಾಡಿತು. ನಕಲಿ ಗುರುತಿನ ಚೀಟಿ ಸೃಷ್ಟಿ ಕುರಿತು ದೂರು ಸಲ್ಲಿಕೆ ಮಾಡಿ ಸೂಕ್ತ ತನಿಖೆ ನಡೆಸುವಂತೆ ಮನವಿ ಸಲ್ಲಿಸಿತು.

ಎಂಎಸ್‍ಎಲ್ ಟೆಕ್ನೊ ಸೊಲ್ಯೂಶನ್ಸ್​​ನಲ್ಲಿ ಮತದಾರರ ನಕಲಿ ಗುರುತುಚೀಟಿ ಸಿದ್ಧಪಡಿಸಿ ನೀಡಲಾಗುತ್ತಿತ್ತು. ಇದು ರಾಷ್ಟ್ರೀಯ ಭದ್ರತೆ ಸಂಬಂಧಿಸಿ ಆತಂಕಕಾರಿ ವಿಚಾರ ಎಂದು ಮನವಿಯಲ್ಲಿ ತಿಳಿಸಿದೆ. ನಕಲಿ ಮತದಾರರ ಚೀಟಿ ಜಾಲದ ವ್ಯಾಪ್ತಿಯ ವಿಚಾರಣೆ ಆಗಬೇಕಿದ್ದು, ಎನ್‍ಐಎ ಅಥವಾ ಸಿಬಿಐಗೆ ತನಿಖೆಗೆ ಇದನ್ನು ಒಪ್ಪಿಸಲು ಶಿಫಾರಸು ಮಾಡುವಂತೆ ಮನವಿ ಮಾಡಿತು.

ಅಕ್ರಮ ಗುರುತು ಚೀಟಿ ಸೃಷ್ಟಿ ಪ್ರಕರಣ: ಸಮಗ್ರ ತನಿಖೆಗೆ ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ

ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‍ಐಆರ್ ಪ್ರಕಾರ, ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಪೊಲೀಸ್ ಇನ್‍ಸ್ಪೆಕ್ಟರ್ ಅವರು ಇದೇ 19ರಂದು ಆರ್​ಟಿ ನಗರದ ಸುಲ್ತಾನ ಪಾಳ್ಯ ಬನಶಂಕರಿ ಕಾಂಪ್ಲೆಕ್ಸ್​​ನ ಎಂಎಸ್‍ಎಲ್ ಟೆಕ್ನೊ ಸೊಲ್ಯೂಶನ್ಸ್​ನಲ್ಲಿ ನಕಲಿ ಗುರುತಿನ ಚೀಟಿಗಳನ್ನು ಸಿದ್ಧಪಡಿಸಲಾಗುತ್ತಿತ್ತು ಎಂದು ತಿಳಿಸಿದ್ದಾರೆ. ಇಲ್ಲಿ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಾನ್ ಕಾರ್ಡ್ ಮತ್ತಿತರ ದಾಖಲಾತಿಗಳನ್ನು ತಮ್ಮ ಅಂಗಡಿಯ ಕಂಪ್ಯೂಟರ್​ನಲ್ಲಿ ಸುಳ್ಳು ಸೃಷ್ಟಿ ಮಾಡಿ ತಮ್ಮ ಸ್ವಂತ ಲಾಭಕ್ಕಾಗಿ ಸಾರ್ವಜನಿಕರಿಗೆ, ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾದವರಿಗೆ ಸಹಕರಿಸುತ್ತಿದ್ದರು.

ನಿಜವಾದ ಗುರುತಿನ ಚೀಟಿಗಳೆಂದು ಹೆಚ್ಚಿನ ಹಣಕ್ಕೆ ನೀಡಿ ಸರಕಾರ ಮತ್ತು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದರು. ಎಂಎಸ್‍ಎಲ್ ಟೆಕ್ನೊ ಸೊಲ್ಯೂಶನ್ಸ್ ಮಾಲೀಕ ಮೌನೇಶ್ ಕುಮಾರ್ ಹಾಗೂ ಈತನ ಕೃತ್ಯಕ್ಕೆ ಸಹಕರಿಸಿದ ಭಗತ್, ರಾಘವೇಂದ್ರ ವಿರುದ್ಧ ಎಫ್‍ಐಆರ್ ದಾಖಲಾಗಿದೆ ಎಂದು ಮನವಿಯಲ್ಲಿ ವಿವರಿಸಿತು. ನಕಲಿ ಮತದಾರರ ಗುರುತು ಚೀಟಿ ಸಿದ್ಧಪಡಿಸುವುದು ಕೂಡ ರಾಷ್ಟ್ರೀಯ ಅಪರಾಧ. ರಾಷ್ಟ್ರೀಯ ಭದ್ರತೆಯ ವಿರುದ್ಧ ನಡೆದ ಕೃತ್ಯ ಇದಾಗಿದೆ ಎಂದು ಗಮನ ಸೆಳೆದು, ನಕಲಿ ಗುರುತಿನ ಚೀಟಿ ಸೃಷ್ಟಿ ಕುರಿತು ದೂರು ಸಲ್ಲಿಕೆ ಮಾಡಿ ಸೂಕ್ತ ತನಿಖೆ ನಡೆಸುವಂತೆ ಬಿಜೆಪಿ ನಿಯೋಗ ಮನವಿ ಮಾಡಿದೆ.

ಇದನ್ನೂ ಓದಿ :ಹೆಬ್ಬಾಳ ನಕಲಿ ಆಧಾರ್, ವೋಟರ್​ ಐಡಿ ಪ್ರಕರಣ: ಸಿಬಿಐ, ಎನ್ಐಎ ತನಿಖೆಗೆ ವಹಿಸಬೇಕು: ಸುರೇಶ್ ಕುಮಾರ್ ಆಗ್ರಹ

ABOUT THE AUTHOR

...view details